ಆಂಧ್ರದಲ್ಲಿ ಪ್ರವಾಹ ಸಂಕಷ್ಟದಲ್ಲಿ ಲಕ್ಷಾಂತರ ಜನ

ಅಮರಾವತಿ,ಜು.೧೭- ಆಂಧ್ರಪ್ರದೇಶದ ಗೋದಾವರಿ ನದಿಯಲ್ಲಿ ಪ್ರವಾಹ ಉಂಟಾಗಿ ಆರು ಜಿಲ್ಲೆಗಳ ೨೦ ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ.
೧೬ ವರ್ಷಗಳ ನಂತರ ಗೋದಾವರಿ ನದಿಯ ಹೊರ ಹರಿವು ೨೫ ಲಕ್ಷ ಕ್ಯೂಸೆಕ್ ಗಡಿ ದಾಟಿದ್ದು ೨೦ ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ.
ಗೋದಾವರಿ ನದಿಯಿಂದ ನಿನ್ನೆ ರಾತ್ರಿ ೨೫.೬೦ ಲಕ್ಷ ಕ್ಯೂಸೆಕ್ ಗಡಿ ದಾಟಿದ್ದು, , ಸರ್ ಆರ್ಥರ್ ಕಾಟನ್ ಬ್ಯಾರೇಜ್‌ನಲ್ಲಿ ಕಳೆದ ೧೬ ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ನೀರು ಹರಿದು ಬಂದಿದೆ .೨೦೦೬ ರ ಆಗಸ್ಟ್ ೭ ರಂದು ಗೋದಾವರಿ ನದಿಯಲ್ಲಿ ೨೮,೫೦,೬೬೪ ಕ್ಯುಸೆಕ್ ನೀರಿನ ಪ್ರವಾಹ ಹಾಗು ೧೯೮೬ ರ ಆಗಸ್ಟ್ ೧೬ ರಂದು ೩೫.೦೬ ಲಕ್ಷ ಕ್ಯೂಸೆಕ್ ಬಳಿಕ ಹೊರಬಿಟ್ಟ ಅತಿ ಹೆಚ್ಚಿನ ಪ್ರವಾಹ ಇದಾಗಿದೆ.
೬೨೮ ಹಳ್ಳಿಗಳು ಭಾದಿತ:
ಪ್ರವಾಹದ ಪರಿಣಾಮವಾಗಿ ೬ ಜಿಲ್ಲೆಗಳಲ್ಲಿನ ೬೨ ಮಂಡಲಗಳ ಅಡಿಯಲ್ಲಿ ಬರುವ ೬೨೮ ಹಳ್ಳಿಗಳು, ವಿಶೇಷವಾಗಿ ಲಂಕಾಸ್ ಗ್ರಾಮಗಳು ದ್ವೀಪಗಳಾಗಿವೆ. ಮಹಾರಾಷ್ಟ್ರ ಮತ್ತು ತೆಲಂಗಾಣದ ಗೋದಾವರಿ ಮೇಲಿನ ಜಲಾನಯನ ಪ್ರದೇಶಗಳಲ್ಲಿ ಮಳೆಕಡಿಮೆಯಾಗಿದ್ದು, ಪ್ರವಾಹ ಕಡಿಮೆಯಾಗುವ ಬಗ್ಗೆ ಭರವಸೆ ಮೂಡಿಸಿದೆ.
ಪ್ರವಾಹ ಪರಿಸ್ಥಿತಿಯ ನಡುವೆ, ಅಧಿಕಾರಿಗಳು ಇದುವರೆಗೆ ಬಾಧಿತ ಗ್ರಾಮಗಳಿಂದ ೭೬,೭೭೫ ಜನರನ್ನು ಸ್ಥಳಾಂತರಿಸಿದ್ದಾರೆ ಮತ್ತು ಅವರಲ್ಲಿ ೭೧,೨೦೦ ಜನರನ್ನು ೧೭೭ ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್ ಅಂಬೇಡ್ಕರ್ ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟಲು ಬಾಧಿತ ಗ್ರಾಮಗಳಲ್ಲಿ ಸುಮಾರು ೨೫೦ ವೈದ್ಯಕೀಯ ಶಿಬಿರ ಸಹ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಲಾ ಹತ್ತು ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ಭಾರತೀಯ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳನ್ನು ರಾಜಮಹೇಂದ್ರವರಂನಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಸಂತ್ರಸ್ತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ ಮತ್ತು ಕನಿಷ್ಠ ಮುಂದಿನ ೨೪ ಗಂಟೆಗಳ ಕಾಲ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಿದ್ದಾರೆ.

ಡ್ರೋಣ್ ಮೂಲಕ ಔಷಧಿ
ಗುಜರಾತ್ ನಲ್ಲಿ ಪ್ರವಾಹ ಎದುರಾಗಿದ್ದು ಡ್ರೋನ್ ಸ್ಟಾರ್ಟ್ ಅಪ್ ಗರುಡಾ ಏರೋಸ್ಪೇಸ್ ವಡೋದರದಲ್ಲಿ ಪ್ರವಾಹದಿಂದ ಪೀಡಿತ ಜನರಿಗೆ ಆಹಾರ ಮತ್ತು ಅಗತ್ಯ ಔಷಧಿಗಳನ್ನು ತಲುಪಿಸಲು ಡ್ರೋನ್‌ಗಳನ್ನು ಎನ್ ಡಿಆರ್ ಎಫ್ ಬಳಸಿಕೊಂಡಿದೆ.