ಆಂಧ್ರದಂತೆ ಕರ್ನಾಟಕದಲ್ಲಿಯೂ ಉಚಿತ ಕೋವಿಡ್ ಚಿಕಿತ್ಸೆಗೆ ಆಗ್ರಹ

ಕಲಬುರಗಿ:ಏ.29:ದೇಶಾದ್ಯಾಂತ ಹೆಚ್ಚುತ್ತಿರುವ ಕರೋನಾ ವೈರಸ್‍ನ ಅಟ್ಟಹಾಸಕ್ಕೇ ಈಗಾಗಲೇ ಜನಜೀವನ ತತ್ತರಿಸಿ ಹೋಗಿದ್ದು, ಬಡವರಿಗೆ ಜೀವನ ನಡೆಸುವದು ಸವಾಲಾಗಿದ್ದು, ಇಂತಹ ಸಮಯದಲ್ಲಿ ಕರೋನಾ ರೋಗಕ್ಕೆ ಒಳಗಾದ ಬಡವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಹೋದರೆ ಹಣವಿಲ್ಲದೆ ಒದ್ದಾಡುವಂತಾಗುತ್ತಿದೆ, ಆಂಧ್ರ ಪ್ರದೇಶದ ಜಗನ್‍ಮೋಹನ್ ರೆಡ್ಡಿಯವರ ಆಡಳಿತ ಸರ್ಕಾರವು ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆಗೆ ಆದೇಶಿಸಿದೆ. ಅದರಂತೆ ಕರ್ನಾಟಕ ಸರಕಾರವು ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಕೋವಿಡ ಚಿಕಿತ್ಸೆಗೆ ಆದೇಶ ಹೊರಡಿಸಬೇಕೆಂದು ಕರ್ನಾಟಕ ವಿಜಯ ಸೇನೆ ಜಿಲ್ಲಾದ್ಯಕ್ಷ ರಾಜು ಎಮ್. ಹಿರೇಮಠ್ ಅವರು ಆಗ್ರಹಿಸಿದ್ದಾರೆ.
ಕೋವಿಡ್ ಹೆಸರಲ್ಲಿ ರಾಜ್ಯದ ಖಾಸಗಿ ಆಸ್ಪತ್ರೆಗಳು ಹಣ ವಸೂಲಿಗೆ ಬೆನ್ನಹತ್ತಿವೆ ಎಂಬ ಮಾತು ಸಹ ಜನರ ಬಾಯಲ್ಲಿ ಕೇಳಿ ಬರುತ್ತಿದ್ದೆ, ಇದನ್ನು ಆಲಿಸಿದ ಬಡವರು ಎಲ್ಲಿ ಖಾಸಗಿ ಆಸ್ಪತ್ರೆಯವರು ಹೆಚ್ಚಿನ ಹಣ ವಸೂಲಿ ಮಾಡುತ್ತಾರೋ ಎಂಬ ಭಯದಿಂದ ಖಾಸಗಿ ಆಸ್ಪತ್ರಗೆ ಬರದೆ ಹಿಂಜರಿಯುತ್ತಿದ್ದು, ಇದರಿಂದ ಬಡವರು ಜೀವ ಕಳೆದುಕೊಳ್ಳುವಂತಾಗುತ್ತಿದೆ. ಬಡವರ ಮನೆ, ಮನದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪಕ್ಕದ ರಾಜ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿಯವರು ಆಂದ್ರ ಪ್ರದೇಶದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆಗೆ ಆದೇಶಿಸಿದ್ದು, ಜಗನ್ ಮೋಹನ ರೆಡ್ಡಿಯವರ ಈ ಆದೇಶ ಆಂಧ್ರಪ್ರದೇಶದ ಜನರಲ್ಲಿ ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ. ಅದೇ ರೀತಿ ಅವರ ಈ ಆದೇಶ ದೇಶ ವ್ಯಾಪ್ತಿಯಲ್ಲಿ ಹರಿದಾಡುತ್ತಿದೆ. ಇದರಿಂದ ಆಂಧ್ರ ಪ್ರದೇಶದ ಬಡವರಲ್ಲಿ ಅಡಗಿಡ ಕೋವಿಡ್ ರೋಗದ ಭಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಆಂಧ್ರದಲ್ಲಿ ರೋಗಿಗಳು ಯಾವುದೆ ಖಾಸಗಿ ಆಸ್ಪತ್ರೆಗೆ ಹಿಂಜರಿಕೆ ಇಲ್ಲದೆ ದಾಖಲಾಗುತ್ತಿದ್ದಾರೆ. ಸದ್ಯ ಕರ್ನಾಟಕದಲ್ಲಿ ಕೋವಿಡ್ ರೋಗದ ಕುರಿತು ಖಾಸಗಿ ಆಸ್ಪತ್ರೆಗಳ ಕುರಿತು ಭಯದ ವಾತಾವರಣವಿದ್ದು, ಇದನ್ನು ಶಮನಗೊಳಿಸಲು ಕೂಡಲೇ ರಾಜ್ಯ ಸರ್ಕಾರ ಉಚಿತ ಕೋವಿಡ್ ಚಿಕಿತ್ಸೆಗೆ ಆದೇಶಿಸಿ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಅಮಾಯಕ ಜನರು ಖಾಸಗಿ ಆಸ್ಪತ್ರೆಗೆ ಹೋದರೆ ಇಲ್ಲ ಸಲ್ಲದ ವಿಚಾರ ಹೇಳಿ ಬಡವರನ್ನು ಭಯ ಭೀತರನ್ನಾಗಿ ಮಾಡಿ ಹಣ ವಸೂಲಿ ದಂಧೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಸಹ ಎಲ್ಲ ಮನೆಮನಗಳಲ್ಲಿ ಹರದಾಡುತ್ತಿದ್ದು, ಇದನ್ನು ಅರಿತು ಸರ್ಕಾರ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆಗೆ ಮುಂದಾಗಿ ಬಡವರ ಕಷ್ಟಕ್ಕೆ ಸ್ಪಂದಿಸಬೇಕು. ಕರ್ನಾಟಕದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆಗೆ ಮುಂದಾದರೆ ಜನರು ಆತ್ಮಸ್ಥೈರ್ಯದೊಂದಿಗೆ ಯಾವುದೇ ಹಿಂಜರಿಕೆ ಇಲ್ಲದೆ ಹಣದ ಚಿಂತೆ ಇಲ್ಲದೆ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ, ಇಂತಹ ಆದೇಶ ಆಲಿಸಿದ ರೋಗಿಗಳಲ್ಲಿ ಹೊಸ ಚೈತನ್ಯ ಬಂದು ಸ್ವಯಂ ಪ್ರೇರಿತರಾಗಿ ಕೋವಿಡ್ ರೋಗಕ್ಕೆ ಒಳಗಾದವರು ಆಸ್ಪತ್ರೆ ಯಾವುದೇ ಹಿಂಜರಿಕೆ ಇಲ್ಲದೆ ದಾಖಲಾಗುತ್ತಾರೆ, ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ವಸೂಲಿಗೆ ಕಡಿವಾಣ ಹಾಕಲು ಕಡಕ ಆದೇಶ ಹೊರಡಿಸುವುದು ಸೂಕ್ತವೆಂದು ಅವರು ತಿಳಿಸಿದ್ದಾರೆ.