ಆಂದ್ರ ಕರ್ನಾಟಕ ಗಡಿಭಾಗದಲ್ಲಿನಾಳೆಯಿಂದ ಗಣಿ ಗಡಿ ಸರ್ವೆ


* 7 ಗಣಿಗಳ ಸರ್ವೆ ಕಾರ್ಯ
* ಗಣಿ‌ಮಾಲೀಕರಿಗೆ ಪತ್ರ
* ಆಂದ್ರ ಕರ್ನಾಟಕದ ಅಧಿಕಾರಿಗಳು ಭಾಗಿ
* ಕೇಂದ್ರದ ಉನ್ನತಾಧಿಕಾರ ಸಮಿತಿ(ಸಿಈಸಿ) ಸೂಚನೆ
ಎನ್.ವೀರಭದ್ರಗೌಡ
ಬಳ್ಳಾರಿ, ಮೇ.28: ಆಂದ್ರ ಮತ್ತು ಕರ್ನಾಟಕ ರಾಜ್ಯದ ಗಡಿಗೆ ಹೊಂದಿಕೊಂಡಂತೆ ಇರುವ ಸಂಡೂರು ತಾಲೂಕಿನ ತುಮಟಿ ಪ್ರದೇಶದ, ರಾಯದುರ್ಗಂ ತಾಲೂಕಿನ ಓಬಳಾಪುರಂ, ಮಲಪನಗುಡಿ ಪ್ರದೇಶದ ಏಳು ಗಣಿಗಳ ಗಡಿ ಗುರುತಿಸುವ ಜಂಟೆ ಸರ್ವೇ ಕಾರ್ಯ ನಾಳೆಯಿಂದ ಆರಂಭಗೊಳ್ಳಲಿದೆ.
ಜೂನ್ 8 ವರೆಗೆ ‌ನಡೆಯುವ ಈ  ಜಂಟಿ ಸರ್ವೆ ಕಾರ್ಯಕ್ಕೆ ಸಂಬಂಧಿಸಿ ಗಣಿ ಮಾಲೀಕರಿಗೆ ಬಳ್ಳಾರಿ ಜಿಲ್ಲಾ ಹಿರಿಯ ಭೂವಿಜ್ಞಾನಿ ಪತ್ರ ಬರೆದು ತಿಳಿಸಿದ್ದಾರೆ.
ನಾಳೆ ಮೇ 29ರಂದು ‘ಮಹಬೂಬ್ ಟ್ರಾನ್ಸ್‌ಪೋರ್ಟ್ ಕಂಪನಿ’ (ಎಂಬಿಟಿ)ಯ ಗಣಿ ಸರ್ವೆ ನಡೆಯಲಿದೆ. ಮೇ 30ರಂದು ‘ಹಿಂದ್ ಟ್ರೇಡರ್ಸ್’ (ಹೆಚ್.ಟಿ), 31ರಂದು ‘ಎನ್. ರತ್ನಯ್ಯ,(ಎನ್.ಆರ್)ಜೂ. 1ರಂದು ‘ಟಿ. ನಾರಾಯಣ ರೆಡ್ಡಿ'(ಟಿಎನ್ ಆರ್), 2 ರಿಂದ 4ರ ವರೆಗೆ ‘ವಿಭೂತಿಗುಡ್ಡ ಮೈನ್ಸ್ ಪ್ರೈ. ಲಿ.’, 5ರಂದು ‘ಸುಗ್ಗುಲಮ್ಮ ಗುಡ್ಡ ಮೈನಿಂಗ್ ಅಂಡ್ ಕಂಪನಿ'(ಓಎಂಸಿ), 6ರಂದು ‘ಬಳ್ಳಾರಿ ಮೈನಿಂಗ್ ಕಾರ್ಪೊರೇಷನ್’ (ಬಿಎಮ.ಎಂ)ಗಳ ಗಣಿ ಸರ್ವೆ ನಡೆಯಲಿದೆ.
ಕೇಂದ್ರದ ಉನ್ನತಾಧಿಕಾರ ಸಮಿತಿ ಯ ಸದಸ್ಯರಿಂದ  ಮೇ 21ರಂದು ನಡೆದ ಸಭೆಯಲ್ಲಿ ಈ ಏಳು ಗಣಿಗಳ ಜಂಟಿ ಸರ್ವೆ ನಡೆಸಲು ತೀರ್ಮಾನಿಸಲಾಗಿದೆ.
ಸರ್ವೆಯನ್ನು ಸುರತ್ಕಲ್‌ನ ಎನ್‌ಐಟಿಕೆ, ಅರಣ್ಯ, ಕಂದಾಯ, ಭೂ ದಾಖಲೆಗಳು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳ ತಾಂತ್ರಿಕ ತಂಡದ ಮೂಲಕ ನಡೆಸಲಿದೆ.
ಬಳ್ಳಾರಿ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಸಮಾಜ ಪರಿವರ್ತನಾ ಸಮುದಾಯದ ಹೋರಾಟಗಾರ ಎಸ್‌.ಆರ್ ಹಿರೇಮಠ ಅವರು 2009ರಲ್ಲಿ ರಿಟ್ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ 2024ರ ಮಾರ್ಚ್ 14ರಂದು ಸುಪ್ರೀಂ ಕೋರ್ಟ್, ‘ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕಬ್ಬಿಣದ ಅದಿರಿನ ಬಿ-1 ಕೆಟಗರಿಗೆ ಸೇರಿರುವ ಈ ಏಳು ಗಣಿಗಳ ಜಂಟಿ ಸರ್ವೆ ನಡೆಸಬೇಕು ಮತ್ತು ನಕ್ಷೆ ಸಿದ್ಧಪಡಿಸಬೇಕು ಎಂದು ಸೂಚಿಸಿತ್ತು. ಇಷ್ಟೇ ಅಲ್ಲದೆ. 2022ರಲ್ಲೂ ಆದೇಶಿಸಿತ್ತು. ಆದರೆ, ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ಅಂತರರಾಜ್ಯ ಗಡಿ ಗುರುತುಗಳನ್ನು ಮರುಸ್ಥಾಪಿಸುವವರೆಗೆ ಜಂಟಿ ಸರ್ವೆ ಮುಂದೂಡಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಮತ್ತೊಂದು ಆದೇಶದಲ್ಲಿ ಹೇಳಿತ್ತು.
ಈ ನಡುವೆ ಎರಡೂ ರಾಜ್ಯಗಳ ಗಡಿ ಗುರುತು ಕಾರ್ಯ ಪೂರ್ಣಗೊಂಡಿದೆ ಎಂದು ಕರ್ನಾಟಕ ಸರ್ಕಾರ 2023ರ ಜ.1ರಂದು ಸಿಇಸಿಗೆ ತಿಳಿಸಿದೆ. ಇದನ್ನು  ಪರಿಗಣಿಸಿ ಸುಪ್ರೀಂ ಕೋರ್ಟ್ ಗಣಿಗಳ ಜಂಟಿ ಸರ್ವೆಗೆ ಮಾರ್ಚ್ 14ರಂದು ಆದೇಶಿಸಿದೆ.
ಇತ್ಯರ್ಥ ಆಗಿಲ್ಲ:
ಕರ್ನಾಟಕ ಮತ್ತು ಆಂಧ್ರ ಪ್ರದೇಶ ನಡುವಿನ ಗಡಿಯೇ ಇನ್ನು ಇತ್ಯರ್ಥ ಆಗಿಲ್ಲ. ಇತ್ತೀಚೆಗೆ ಸರ್ವೇ ಆಪೊ್ ಇಂಡಿಯಾ ನಡೆಸಿದ ಸರ್ವೇ ಮತ್ತು ಗಡಿ ಗುರುತಿಸಿರುವ ನಕ್ಷೆಗೆ ಬಳ್ಳಾರಿ ಜಿಲ್ಲಾ ಆಡಳಿತ, ರಾಜ್ಯದ ಪ್ರಧಾನ ಕಾರ್ಯದರ್ಶಿ ಸಹಿ ಮಾಡಿದ್ದರೂ, ಮುಖ್ಯ ಕಾರ್ಯದರ್ಶಿ ಮತ್ತು ಸರ್ವೇ ತಂಟದ ಮುಖ್ಯಸ್ಥರೇ ಸಹಿ ಮಾಡಿಲ್ಲ, 1896 ನಕ್ಷೆ ಪ್ರಕಾರ ಸರ್ವೆ ನಡೆದಿಲ್ಲ ಎಂಬ  ಸ ಆಕ್ಷೇಪವನ್ನು ಟಪಾಲ್ ಗಣೇಶ್ ಎತ್ತಿದ್ದಾರೆ.
ಇದರ ಪರಾಮರ್ಶೆಗೆ ತಜ್ಞರ ಸಮಿತಿ ರಚಿಸುವುದಾಗಿ 2023ರ ಬೆಳಗಾವಿ ಅಧಿವೇಶನದಲ್ಲಿ ಕಂದಾಯ ಸಚಿವರು ತಿಳಿಸಿದ್ದರು. ಆದರೆ, ಈ ವರೆಗೆ ಸಮಿತಿ ರಚನೆಯಾಗಿಲ್ಲ. ಹೀಗಾಗಿ ಗಣಿ ಸರ್ವೆ ಅಪೂರ್ಣವಾಗಿಯೇ ಉಳಿದಿದೆ. ಸರ್ಕಾರದ ಸಹಿಯೇ  ಇಲ್ಲದ ಗಡಿ ಸರ್ವೆ ಪೂರ್ಣವಾಗುವುದು ಹೇಗೆಂದು ಟಪಾಲ್ ಗಣೇಶ್ ಪ್ರಶ್ನೆ ಮಾಡಿದ್ದಾರೆ.
ಈಗ ನಡೆಯುವ ಏಳು ಗಣಪಾಲ ಗಳ ಸರ್ವೆಯಿಂದ ಯಾವ, ಯಾವ ಗಣಿಗಳಿಂದ ಎಷ್ಟು ಅದಿರನ್ನು ತೆಗೆಯಲಾಗಿದೆಂಬುದು ಅರಿಯಲಿದೆ. ಯಾವ ಗಣಿಗಳಿಂದ ಅಕ್ರಮವಾಗಿ ಅದಿರು ತೆಗೆದು ಸಾಗಿಸಿದೆ. ಕೆಲ ಗಣಿಗಳಲ್ಲಿ ತೆಗೆಯದೇ ಸಾಗಾಣೆ ಮಾಡಿದ್ದರ ಬಗ್ಗೆ ಅರಿಯಬಹುದಾಗಿದೆ.
ಈ ಹಿಂದೆ ಅಮನತರಗಂಗಮ್ಮಕೊಂಡ ಮೈನ್ಸ್ ನಿಂದ 29 ಲಕ್ಷ ಟನ್ ಅದಿರು ತೆಗೆಯಲಾಗಿದೆಂದು ಪರ್ಮಿಟ್ ಪಡೆದು ಅದಿರು ಸಾಗಾಣೆ ಮಾಡಿತ್ತು ಓಎಂಸಿ. ಆದರೆ ಅಲ್ಲಿ ಗಣಿಗಾರಿಕೆಯೇ ಅಷ್ಟು ಪ್ರಮಾಣದಲ್ಲಿ ನಡೆದಿರಲಿಲ್ಲ.
ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ಈ ಹಿಂದೆ ಮಾಜಿ ಸಚಿವರು ವ ಜನಾರ್ಧನರೆಡ್ಡಿ ಓಎಂಸಿ ಹೆಸರಲ್ಲಿ ಕೊಳ್ಳೆ ಹೊಡೆದಿದ್ದನ್ನು ಮುಚ್ಚಿಹಾಕಲು ಬೇಕಾದಂತೆ ಸರ್ವೇ ಕಾರ್ಯಗಳನ್ನು ನಡೆಸಿವೆ. ಏನಿದ್ದರೂ ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಲಿದೆಂದು ಟಪಾಲ್ ಗಣೇಶ್ ಹೇಳಿದ್ದಾರೆ.