
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.27: ಆಂಧ್ರಪ್ರದೇಶದಲ್ಲಿ ವಾಸವಾಗಿರುವ ಕನ್ನಡಿಗರನ್ನು ಕೇರಳ ಹಾಗೂ ಮಹಾರಾಷ್ಟ್ರದ ಕನ್ನಡಿಗರಂತೆ ಗಡಿನಾಡು ಕನ್ನಡಿಗರು ಎಂದು ಪರಿಗಣಿಸುವುದರ ಜೊತೆಗೆ, ಉದ್ಯೋಗದಲ್ಲಿ ಮೀಸಲಾತಿ ಕೊಡಲು ಸರಕಾರಕ್ಕೆ ವರದಿ ನೀಡಬೇಕೆಂದು ಆಂಧ್ರಪ್ರದೇಶದ ಕನ್ನಡ ಸಂಘಗಳ ಒಕ್ಕೂಟ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಒಕ್ಕೂಟದ ಸದಸ್ಯರು ಮುಖಂಡರು. ನಗರದ ಕಮ್ಮ ಭವನದಿಂದ ಡಿಸಿ ಕಚೇರಿವರಗೆ ತಮ್ಮ ಬೇಡಿಕೆಗಳ ಘೋಷಣೆ ಕೂಗುತ್ತ ಮೆರವಣಿಗೆ ಮೂಲಕ ಆಗಮಿಸಿ
ಆಂದ್ರ ಪ್ರದೇಶದಿಂದ ಕರ್ನಾಟಕ ರಾಜ್ಯಕ್ಕೆ ಬಂದು ಶಾಲಾ ಕಾಲೇಜುಗಳಲ್ಲಿ ಕಲಿಯುವ ನಮ್ಮ ಮಕ್ಕಳಿಗೆ ವಸತಿ ನಿಲಯಗಳಲ್ಲಿ ಪ್ರವೇಶ ಅವಕಾಶ ನೀಡಬೇಕು.
ನಮ್ಮ ಮಕ್ಕಳಿಗೆ ನಮ್ಮ ಕಂದಾಯ ಅಧಿಕಾರಿಗಳು ಕೊಟ್ಟಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಿಂದಲೇ ವಿದ್ಯಾರ್ಥಿವೇತನವನ್ನು ಕೂಡಬೇಕು. ನಮ್ಮ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ನೀಡಬೇಕು.
ಆಂಧ್ರಪ್ರದೇಶದಲ್ಲಿನ ಕಲಾವಿದರನ್ನು ಗುರುತಿಸುವ ಜೊತೆಗೆ ಅವರಿಗೆ ಮಾಸಾಶನವನ್ನು ನೀಡಬೇಕು ಮೊದಲಾದ ಬೇಡಿಕೆಗಳ ಮನವಿ ಸಲ್ಲಿಸಲಾಯ್ತು.
ಬಳ್ಳಾರಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಕರ್ನೂಲು ಹಾಗೂ ಅನಂತಪುರ ಜಿಲ್ಲೆಯ ಆದೋನಿ, ಆಲೂರು, ರಾಯದುರ್ಗ ಹಾಗೂ ಮಡಕಶಿರ ತಾಲೂಕುಗಳು 1955 ರಲ್ಲಿ ನಡೆದ ಭಾಷಾ ವಾರು ಪ್ರಾಂತ್ಯಗಳ ರಚನೆಗೆ ಮೊದಲು ಬಳ್ಳಾರಿ ಜಿಲ್ಲೆಯಲ್ಲಿದ್ದ ಅಚ್ಚ ಕನ್ನಡ ಮಾತನಾಡುವ ಪ್ರದೇಶಗಳಾಗಿದ್ದವು. 1956 ರಲ್ಲಿ ನಡೆದ ಭಾಷಾವಾರು ಪ್ರಾಂತಗಳ ರಚನೆಯ ಸಂದರ್ಭದಲ್ಲಿ ಪಾವಗಡ ಎನ್ನುವ ಒಂದೇ ಒಂದು ತಾಲೂಕಿಗಾಗಿ ನಾಲ್ಕು ತಾಲೂಕುಗಳನ್ನು ಆಂಧ್ರಪ್ರದೇಶಕ್ಕೆ ಬಿಟ್ಟುಕೊಟ್ಟಿದ್ದು ಇತಿಹಾಸ. ಇಂದಿಗೆ ಆರೂವರೆ ದಶಕಗಳು ಸಂದಿವೆ ನಮ್ಮನ್ನು ಭಾವನಾತ್ಮಕವಾಗಿ ಒಗ್ಗೂಡಿಸುವ ಕೆಲಸವನ್ನು ಕರ್ನಾಟಕ ಸರ್ಕಾರಗಳು ಮಾಡುತ್ತಿಲ್ಲ ನಾವು ಅಂದಿನಿಂದ ಇಂದಿನವರೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿದ್ದೇವೆ.
ಮೊದಲು ನೂರಾರು ಕನ್ನಡ ಶಾಲೆಗಳಿದ್ದ ನಮ್ಮ ರಾಜ್ಯದಲ್ಲಿ ಈಗ ಕರ್ನೂಲು ಅನಂತಪುರ ಜಿಲ್ಲೆಯಲ್ಲಿ 40 ಪ್ರಾಥಮಿಕ 5 ಹಿರಿಯ ಪ್ರಾಥಮಿಕ ಹಾಗೂ 17 ಪ್ರೌಢಶಾಲೆಗಳು ಸೇರಿ ಒಟ್ಟು 62 ಕನ್ನಡ ಶಾಲೆಗಳಿವೆ ಈ ಶಾಲೆಗಳಲ್ಲಿ 12,000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಹತ್ತನೇ ತರಗತಿಯ ನಂತರ ನಮ್ಮ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಇಲ್ಲದಿರುವುದರಿಂದ ಅನಿವಾರ್ಯವಾಗಿ ತಮ್ಮ ರಾಜ್ಯಕ್ಕೆ ಬಂದು ಕಲಿಯುತ್ತಾರೆ. ತಮ್ಮ ರಾಜ್ಯಕ್ಕೆ ಬಂದು ಕಲಿಯುವ ನಮ್ಮ ಮಕ್ಕಳಿಗೆ ಸೌಲಭ್ಯಗಳನ್ನು ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.