ಆಂತರ್ಯವೇ ಸಹಜ ಕವಿಯಾಗಲು ಸ್ಪೂರ್ತಿ: ಪ್ರೊ.ವಿಕ್ರಮ ವಿಸಾಜಿ

ಮಾದನಹಿಪ್ಪರಗಿ:ಫೆ.18: ಮಹಾನ್ ಲೇಖಕರು ಸಾಹಿತಿಗಳು ತಮ್ಮ ಆಂತರ್ಯದೊಂದಿಗೆ ಸಂವಾದ ನಡೆಸಿ ಕಾವ್ಯ ಕಟ್ಟುತ್ತಾರೆ. ಆದರೆ ಸಮಾಜದೊಂದಿಗೆ ಸಂವಾದ ನಡೆಸಿ ತಮ್ಮ ಆಂತರ್ಯ ಹಾಗೆ ಬಿಟ್ಟರೆ ಕಾವ್ಯ ಹುಟ್ಟುವುದಿಲ್ಲ. ಬೇಂದ್ರೆ ಒಬ್ಬ ಸಹಜ ಕವಿಯಾಗಲು ಆಂತರ್ಯವೇ ಸ್ಪೂರ್ತಿಯಾಗಿತ್ತು ಎಂದು ಮಾನವಿಕ ಮತ್ತು ಭಾಷಾ ನಿಕಾಯದ ಡೀನ ಹಾಗೂ ಪ್ರದ್ಯಾಪಕರು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಲಬುರಗಿಯ ಪ್ರೊ. ವಿಕ್ರಮ ವಿಸಾಜಿ ಹೇಳಿದರು.
ನಿನ್ನೆ ಮಾದನಹಿಪ್ಪರಗಿಯ ಶ್ರೀ ಶಿವಲಿಂಗೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವರಕವಿ ದ.ರಾ.ಬೇಂದ್ರೆ ಅವರ 128 ನೇ ಜನ್ಮ ದಿನಾಚರಣೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಬೇಂದ್ರೆಯವರ ಕಾವ್ಯಗಳಲ್ಲಿ ಬದುಕಿನ ರಹಸ್ಯ ನಿಗೂಡತೆ ಬದುಕಿನ ಸಹಜತೆ ಬರಲು ಸಾಧನ ಕೇರಿಯ ಪರಿಸರ. ಬದುಕಿನವರೆಗೂ ಅವರಿಗೆ ಸ್ಥಿರವಾದ ಉದ್ಯೋಗ ಇರಲಿಲ್ಲ. ಕಾವ್ಯ ರಚನೆಗೆ ಬದುಕಿನ ಅಸ್ಥಿರತೆ ಅಡ್ಡಿ ಬರಲಿಲ್ಲ. ಅವರ ಕಾವ್ಯಗಳಲ್ಲಿ ಅನುಭಾವಿಕತೆ ಹೆಚ್ಚಾಗಿ ಕಂಡು ಬರುತ್ತದೆ. ಸಾಮಾನ್ಯವಾಗಿ ದುರ್ಬಲ ಕವಿಗಳು ಬದುಕಿನ ಮೇಲಸ್ತರದ ವಿಷಯಗಳ ಬಗ್ಗೆ ಬರೆಯುತ್ತಾರೆ. ಆದರೆ ಬೇಂದ್ರೆಯವರು ಕಾವ್ಯಗಳಲ್ಲಿ ನಿಗೂಡತೆ, ರಹಸ್ಯ, ಆಡು ಭಾಷೆಯಲ್ಲಿ ಸರಳವಾಗಿರುವುನ್ನು ಕಾಣಬಹುದು. ಕನ್ನಡ ಮರಾಠಿ, ಸಂಸ್ಕøತ ಇಂಗ್ಲೀಷ ಸಾಹಿತ್ಯ ಬಲ್ಲವರಾಗಿದ್ದರು. ನಾಳಿನ ಬದುಕು ಹೇಗೆ ಎಂಬುದು ಗೊತ್ತಿರದೆ ಎಲ್ಲವನ್ನು ಸಹಜವಾಗಿ ಸ್ವೀಕರಿಸಿ ಕಾವ್ಯಗಳನ್ನು ಬರೆಯುತ್ತಿದ್ದರು. ಬದುಕಿನಲ್ಲಿ ಐದು ಮಕ್ಕಳನ್ನು ಕಳೆದುಕೊಂಡರೂ ದುಖವನ್ನು ಮೀರಿಸುವಂತಹ ಮನಸ್ಥಿತಿ ಅವರ ಬರವಣಿಗೆಯಲ್ಲಿ ಕಂಡು ಬರುತ್ತದೆ. ಅವರ ಪ್ರಕಾರ ಜೀವನದಲ್ಲಿ ಯಾವುದು ವಿಫುಲವಲ್ಲ. ಕಷ್ಟ ಸುಖ ದುಖ ಎಲ್ಲವೂ ಕೂಡ ಜೀವನದ ಪಾಠಗಳೇ. ಯಾವುದೇ ಘಟನೆಗಳು ನಿರುಪಯುಕ್ತವಲ್ಲ. ಅವರ ಕಾವ್ಯಗಳನ್ನು ಆಳವಾಗಿ ನೋಡಿದರೆ ಅದರಲ್ಲಿ ಮುಗ್ಧತೆ ಎದ್ದು ಕಾಣುತ್ತದೆ. ಎಲ್ಲಿ ಮುಗ್ದತೆ ಇರುತ್ತೆದೆಯೋ ಅಲ್ಲಿಯೇ ವಿವೇಕ ಜಾಗೃತ ವಾಗಿರುತ್ತದೆ. ಬೇಂದ್ರೆಗೆ ಯಾವುದು ಸ್ಪೂರ್ತಿ ಎಂದು ಕೇಳಿದರೆ ವಿವೇಕ ಮತ್ತು ಅವರ ಆಂತರ್ಯದ ಧ್ವನಿ. ಯಾರು ಅಂತರ್ಯದ ಧ್ವನಿಗೆ ಬದ್ದರಾಗಿತ್ತಾರೆಯೋ ಅವರು ಮಾತ್ರ ಪ್ರಮಾಣಿಕವಾಗಿ ಸಂವೇದನಾಶೀಲರಾಗಿ ಬರೆದು ಬದುಕಲಿಕ್ಕೆ ಸಾಧ್ಯ ಎಂದರು. ಮಂದುವರಿದು, ಸಮಾಜದ ಜೊತೆ ಸಂವಾದ ಮಾಡುತ್ತ. ಆಂತರ್ಯವನ್ನು ಬಿಟ್ಟರೆ ಕಾವ್ಯ ಹುಟ್ಟುವುದಿಲ್ಲ. ಅವರ ಕಾವ್ಯಗಳಲ್ಲಿ ಸ್ತ್ರೀ ಭಾಷೆ ಕಾಣಬಹುದು. ತಾಯ್ತನವೂ ಇದೆ. ಒಬ್ಬ ಗಂಡಸು ತನ್ನ ಅಹಂಭಾವ ಅಹಂಕಾರ ನಿರಸನಗೊಳಿಸಿ ಆಂತರ್ಯದಲ್ಲಿ ಹೆಣ್ಣಾಗಿ, ಮುಗ್ದತೆ ವಿನಯ ನಿಗೂಡತೆ ಎಲ್ಲವನ್ನು ಕಾಪಾಡಿಕೊಂಡು ಕವಿತೆ ಬರೆಯುವ ಕ್ರಮ ದರಾ ಬೇಂದ್ರೆ ಸಾಧಿಸಿದ್ದರು. ಜೀವನದ ಎಲ್ಲಾ ಮುಖಗಳನ್ನು ಒಳ ತಗೊಂಡು, ಅವುಗಳಿಗೆ ಪಾಕ ಮಾಡಿ ರಸ ಹುಟ್ಟು ಹಾಕಿ ಭಾವವನ್ನು ಹುಡುಕಿ ಅರ್ಥ ಕಟ್ಟುವ ಕಲೆ ಬೇಂದ್ರೆಯವರಿಗೆ ಮಾತ್ರ ಇತ್ತು ಎಂದು ಹೇಳಿದರು. ಇನ್ನೊಬ್ಬ ಅತಿಥಿ ಶಾಸ್ತ್ರೀಯ ಕೇಂದ್ರದ ನಿರ್ದೇಶಕರು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಲಬುರಗಿಯ ಡಾ. ಬಿ.ಬಿ.ಪೂಜಾರ ಮಾತಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಬಸವಂತರಾವ ಪಾಟೀಲ ಮಾತನಾಡಿ ವಿದ್ಯಾರ್ಥಿಗಳು ಓದು ಹವ್ಯಾಸ ಬೆಳೆಸಿಕೊಂಡು ಬರಬೇಕು. ಸ್ವಾಗತ ಮತ್ತು ಪ್ರಸ್ತಾವಿಕ ಭಾಷಣವನ್ನು ಕಾರ್ಯಕ್ರಮ ರೂವಾರಿ ಕನ್ನಡ ವಿಭಾಗ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಬಸಣ್ಣ ಶೆಟ್ಟಿ ನಡೆಸಿಕೊಟ್ಟರು. ನಂತರ ಹೊಸಗನ್ನಡ ಸಾಹಿತ್ಯದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಪ್ರಥಮ ಬಹುಮಾನ ಪ್ರಶಾಂತ ಹೊನ್ನಳ್ಳಿ, ವಿತೀಯ ಬಹುಮಾನ ವಿದ್ಯಾಶ್ರೀ ಸಲಗರ, ತೃತೀಯ ಬಹುಮಾನಗಳನ್ನು ಮೋನಿಕಾ, ಬಸವರಾಜ, ರತ್ನಾಬಾಯಿ, ನಾಲ್ಕನೆ ಬಹುಮಾನ ಭೂಮಿಕಾ ಪಾಟೀಲ ಪಡೆದರು. ಪ್ರಾರ್ಥನಾ ಗೀತೆ ರಂಜಿತಾ ಚಿಂಚೋಳಿ ಸ್ವಾಗತ ಗೀತೆ ಮೀನಾಕ್ಷಿ ಐಹೊಳೆ ಸಂಗಡಿಗರು. ನಿರೂಪಣೆ ಪಂಪಾ ನಾಯಕ್ ವಂದನಾರ್ಪಣೆ ಡಾ. ರಾಜಕುಮಾರ ಮಾಳಗೆ ನಡೆಸಿಕೊಟ್ಟರು.