ಆಂತರಿಕ ಕುತಂತ್ರದಿಂದ ಬಿಎಸ್‌ವೈ ಮನೆ ಮೇಲೆ ದಾಳಿ

ಬೆಂಗಳೂರು,ಮಾ.೨೮:ಬಿಜೆಪಿಯ ಆಂತರಿಕ ಕುತಂತ್ರದಿಂದ ಯಡಿಯೂರಪ್ಪರವರ ಮನೆ ಮೇಲೆ ದಾಳಿ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪರವರನ್ನು ರಾಜಕೀಯವಾಗಿ ಮುಗಿಸುವ ಬಿಜೆಪಿಯ ಆಂತರಿಕ ಕುತಂತ್ರ ಭಾಗ ಅವರ ಮನೆ ಮೇಲಿನ ದಾಳಿ ಎಂದರು.ಮೀಸಲಾತಿ ವಿಚಾರದಲ್ಲಿ ಗೊಂದಲ ಮೂಡಿಸಿರುವವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜನ ಅನ್ಯಾಯವಾದಾಗ ಅಧಿಕಾರದಲ್ಲಿರುವವರ ಮೇಲೆ ಸಿಟ್ಟು ತೋರುವುದು ಸಹಜ. ಆದರೆ, ಅಧಿಕಾರ ಇಲ್ಲದ ಯಡಿಯೂರಪ್ಪರವರ ಮನೆ ಮೇಲೆ ದಾಳಿಯಾಗಿದೆ ಎಂದರೆ ಇದು ಬಿಜೆಪಿಯ ಕುತಂತ್ರಕ್ಕೆ ಸಾಕ್ಷಿಯಲ್ಲದೆ ಮತ್ತೇನು ಎಂದು ಅವರು ಪ್ರಶ್ನಿಸಿದರು.ಬಿಜೆಪಿಯಲ್ಲಿ ಯಡಿಯೂರಪ್ಪರವರನ್ನು ಮೂಲೆಗುಂಪು ಮಾಡಲಾಗಿತ್ತು, ಈಗ ಗೃಹ ಸಚಿವ ಅಮಿತ್ ಶಾ, ಯಡಿಯೂರಪ್ಪರವರು ಮನೆಗೆ ಹೋಗಿ ಅವರ ಜತೆ ಉತ್ತಮ ಸಂಬಂಧ ಹೊಂದಿರುವಂತೆ ತೋರಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಈ ಮೂಲಕ ಯಡಿಯೂರಪ್ಪರವರ ಮೂಲೆ ಗುಂಪನ್ನು ದೃಢಪಡಿಸಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಯಡಿಯೂರಪ್ಪರವರನ್ನು ನಿಯಂತ್ರಿಸಲು ಸಾಕಷ್ಟು ಒತ್ತಡ ಹೇರಲಾಗುತ್ತದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದರು.ರಾಜ್ಯಸರ್ಕಾರದ ಮೀಸಲಾತಿ ವಿಚಾರ ಇಡೀ ದೇಶದಲ್ಲೇ ಗೊಂದಲ ಮೂಡಿಸಿದೆ. ಜನರನ್ನು ವಂಚಿಸಲು ಇಬ್ಬರು ಸಚಿವರೇ ಕೂತು ಈ ಸುಳ್ಳು ಮೀಸಲಾತಿ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಯಾವ ವರದಿಯಾಧಾರದ ಮೇಲೆ ಸರ್ಕಾರ ಈ ತೀರ್ಮಾನ ಮಾಡಿದೆ ಎಂದು ಅವರು ಪ್ರಶ್ನಿಸಿದರು.
೨ನೇ ಪಟ್ಟಿ
ಕಾಂಗ್ರೆಸ್ ಅಭ್ಯರ್ಥಿಗಳ ೨ನೇ ಪಟ್ಟಿಯನ್ನು ಮಾ. ೩೦ರ ನಂತರ ಬಿಡುಗಡೆ ಮಾಡಲಾಗುವುದು, ಮೊದಲ ಪಟ್ಟಿಯಲ್ಲಿ ಯಾವುದೇ ಗೊಂದಲಗಳು ಇಲ್ಲ ಎಂದವರು ಸ್ಪಷ್ಟಪಡಿಸಿದರು.ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮನ್ನು ಸಂಪರ್ಕಿಸಿವೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಯಾರನ್ನೂ ಸಂಪರ್ಕ ಮಾಡಿಲ್ಲ. ಮಾಡಿದ್ದರೆ ಅವರ ಹೆಸರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿ ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದೆ ಎಂದರು.