ಆಂಜನೇಯ ಇದಿಯಪ್ಪಗೆ ಶಿಕ್ಷಣ  ಸಾರಥಿ ಪ್ರಶಸ್ತಿ 

ಜಗಳೂರು.ಜು.೨೬; ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ದೇವಿಕೆರೆ ಕ್ಲಸ್ಟರ ನ ಕ್ರಿಯಾಶೀಲ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಆಂಜನೇಯ ಇದಿಯಪ್ಪ ಇವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಕೊಡ ಮಾಡುವ ಶಿಕ್ಷಣ  ಸಾರಥಿ ಪ್ರಶಸ್ತಿ ಒಲಿದು ಬಂದಿದೆ.ಸಿ.ಆರ್‌.ಪಿ ಆಂಜನೇಯ ಇದಿಯಪ್ಪ ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಉಮಾದೇವಿ.ಬಿ.  ಹಾಗೂ ಕ್ಷೇತ್ರ ಸಮಾನಾಧಿಕಾರಿಗಳಾದ  ಹಾಲಪ್ಪ ಡಿ. ಡಿ ರವರ ಮಾರ್ಗದರ್ಶನ ಸಹಕಾರ ಸಲಹೆ ಹಾಗೂ ವಿವಿಧ ಸಿ.ಆರ್.ಪಿ ಗಳ ಮಾರ್ಗದರ್ಶನ ಹಾಗೂ ಕ್ಲಸ್ಟರ ನ ಶಿಕ್ಷಕರುಗಳ ಸಹಾಯದಿಂದ ವಿಶಿಷ್ಟವಾದ ಮಾದರಿ ಆಗುವ ರೀತಿಯಲ್ಲಿ ಸಂಪನ್ಮೂಲ ಕೇಂದ್ರ
ಅಣಿಗೊಳಿಸಿರುವುದು ಶ್ಲಾಘನೀಯವಾಗಿದೆ.ಸುಭದ್ರವಾದ ಆರ್.ಸಿ.ಸಿ.ಕಟ್ಟಡದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕೆ ಸುಸಜ್ಜಿತವಾದ ಗ್ರಂಥಾಲಯ ಶಿಕ್ಷಣದ ಮಹತ್ವ ಸಾರುವ ಧ್ಯೇಯ ವಾಕ್ಯಗಳ ಗೋಡೆ ಬರಹಗಳು ಹಾಗೂ ಕ್ಲಸ್ಟರ ನ ಎಲ್ಲ ಶಾಲೆಗಳ ಶಿಕ್ಷಕರುಗಳ ಹಾಗೂ ಮಕ್ಕಳ ಮಾಹಿತಿಯನ್ನು ಒಳಗೊಂಡಂತೆ ಸಮಗ್ರ ಮಾಹಿತಿಯನ್ನ ದೇವಿಕೆರೆ ಕ್ಲಸ್ಟರ್ ಹೊಂದಿರುತ್ತದೆ.ಸಿ.ಆರ್.ಪಿ ಆಂಜನೇಯ ಇದಿಯಪ್ಪನವರು ಶಿಕ್ಷಕರಿಗೆ ಟಿ.ಪಿ.ಡಿ ತರಬೇತಿಯನ್ನು ನೀಡಲು ಜಿಲ್ಲೆಯ ಎಲ್ಲಾ ತಾಲೂಕಿಗೆ ತೆರಳಿ ನೀಡಿರುವುದು ವಿಶೇಷ ಹಾಗೂ ತಾಲೂಕಿನಲ್ಲಿ ಉತ್ತಮವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೆ ತರಬೇತಿ ನೀಡುವುದರಲ್ಲಿ ಮುಂಚೂಣಿ, ಮತ್ತು ಕೋವಿಡ್ ಸಂದರ್ಭದಲ್ಲಿ ಗೂಗಲ್ ಮೀಟ್ ಹಾಗೂ ಜೂಮ್ ಮೀಟ್ ನಂತಹ ಆಪ್ ಗಳ ಬಳಕೆಯ ಮೂಲಕ ದೇವಿಕೆರೆ ಕ್ಲಸ್ಟರ್ ನ ಎಲ್ಲ ಮಕ್ಕಳಿಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮದ ರೀತಿಯಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ಪಂಚಾಯಿತಿ ವತಿಯಿಂದ ಬಹುಮಾನಗಳನ್ನು ಮಕ್ಕಳಿಗೆ ವಿತರಿಸಿರುವುದು ಬಹಳ ವಿಶೇಷವಾದ ಕಾರ್ಯವಾಗಿದೆ.
ಮತ್ತೊಂದು ವಿಶೇಷವಾದ ಕೆಲಸವೇನೆಂದರೆ, ಕ್ಲಸ್ಟರ್ ಮಟ್ಟದಲ್ಲಿ ನಿವೃತ ಶಿಕ್ಷಕರಿಗೆ ಪ್ರತಿ ವರ್ಷವೂ ಸಹ ಕ್ಲಸ್ಟರ್ ನ ಎಲ್ಲ ಶಿಕ್ಷಕರನ್ನು ಒಟ್ಟುಗೂಡಿಸಿ ಸನ್ಮಾನಿಸಿಕೊಂಡು ಬರುತ್ತಿರುವುದು ಅವರ ಕಾರ್ಯಕ್ಕೆ ಕೈಕನ್ನಡಿಯಾಗಿದೆ, ಶಿಕ್ಷಣ ಸಾರಥಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗೆ ದಾವಣಗೆರೆ ಜಿಲ್ಲಾ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಶಿಕ್ಷಕಿ ಸಾಹಿತಿಯಾದ ಶ್ರೀಮತಿ ಮಂಜುಳಾ ಪಾಟೀಲ್ ರವರು ಇವರನ್ನು ಗುರುತಿಸಿ ಆಯ್ಕೆ ಮಾಡಿ ರಾಜ್ಯ ಹಂತಕ್ಕೆ ಶಿಫಾರಸ್ಸು ಮಾಡಿದ್ದಾರೆ.