
ಅಥಣಿ :ಅ.1: ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಿರ್ಮಿಸಲಾದ ಪಶು ವೈದ್ಯಕೀಯ ಮಹಾವಿದ್ಯಾಲಯ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಅಗಸ್ಟ್.11ರಂದು ಬೆಳಗ್ಗೆ 10 ಗಂಟೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಸೇರಿದಂತೆ 6 ಸಚಿವರು ಆಗಮಿಸಲಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕೊಕಟನೂರ ಗ್ರಾಮದ ಪಶುವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡ ವೀಕ್ಷಿಸಿ, ಕಾರ್ಯಕ್ರಮದ ಸ್ಥಳ ಪರಿಶೀಲಿಸಿ ನಂತರ ತಾಲೂಕು ಅಧಿಕಾರಿಗಳ ಜತೆ ಸಭೆ ನಡೆಸಿ ಅವರು ಮಾತನಾಡಿದರು.
ತಾಲೂಕಿನ ಕೊಕಟನೂರ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಪಶು ವೈದ್ಯಕೀಯ ಮಹಾ ವಿದ್ಯಾಲಯ, ಬಸ್ ನಿಲ್ದಾಣ, ಅಥಣಿಯಲ್ಲಿ ನಿರ್ಮಿಸಲಾದ ವಾಲ್ಮೀಕಿ ಭವನ, ಆರ್‍ಟಿಓ ಕಚೇರಿ, ಶ್ರೀ ಬಸವೇಶ್ವರ ಪುತ್ಥಳಿ ಅನಾವರಣ, ಚಮಕೇರಿ ರಸ್ತೆಯಲ್ಲಿರುವ ಭೋವಿ ಸಮಾಜದ ಶ್ರೀ ಸಿದ್ದರಾಮೇಶ್ವರ ಏತ ನೀರಾವರಿ ಯೋಜನೆ, ಸತ್ತಿ ಮತ್ತು ಚಿಕ್ಕೂಡ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ತೆಲಸಂಗ ಗ್ರಾಮದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ವಸತಿ ನಿಲಯ, ಸೇರಿದಂತೆ ಹಲವು ಕಾಮಗಾರಿಗಳು ಲೋಕಾರ್ಪಣೆಗೊಳ್ಳಲಿವೆ ಎಂದರು.
ಬಾಕಿ ಉಳಿದಿರುವ ಅಲ್ಪಸ್ವಲ್ಪ ಕಾಮಗಾರಿಗಳನ್ನ ಕಡಿಮೆ ಅವಧಿಯಲ್ಲಿ ತೀವ್ರಗತಿಯಲ್ಲಿ ಪೂರ್ಣಗೊಳಿಸಬೇಕು ಎಂದರು,
ಈ ಸಮಾರಂಭದಲ್ಲಿ ಸುಮಾರು 50 ಸಾವಿರ ಜನ ಸೇರುವ ನಿರೀಕ್ಷೆಯಿದ್ದು ಪೆÇಲೀಸ್ ಇಲಾಖೆ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಲು ಕ್ರಮ ಕೈಗೊಳ್ಳಬೇಕು. ಊಟ, ನೀರು, ಸಾರಿಗೆ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಕಾರ್ಯಕರ್ತರು ಮತ್ತು ಅಧಿಕಾರಿಗಳು ನೋಡಿಕೊಳ್ಳಬೇಕು. ಕಾರ್ಯಕ್ರಮ ಯಶಸ್ವಿಗೆ ಇಂದಿನಿಂದಲೇ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಈ ವೇಳೆ ತಹಶೀಲ್ದಾರ ಬಿ.ಎಸ್. ಕಡಕಬಾವಿ, ಡಿವೈಎಸ್ ಪಿ ಶ್ರೀಪಾದ ಜಲ್ದೆ ಪಶು ವೈದ್ಯಕೀಯ ಮುಖ್ಯ ಅಧಿಕಾರಿ ಎನ್.ಎ. ಪಾಟೀಲ, ಲೊಕೋಪಯೋಗಿ ಇಲಾಖೆಯ ಜಯಾನಂದ ಹಿರೇಮಠ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾ ವಾಲಿ, ಚಿಕ್ಕನೀರಾವರಿ ಇಲಾಖೆ ಅಭಿಯಂತರ ಎಸ್.ಎಸ್. ಮಾಕಾಣಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಯಾದವಾಡ, ಸಂಗೋಪನಾ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಹುಂಡೇಕಾರ, ಸಿಪಿಐ ರವೀಂದ್ರ ನಾಯ್ಕೋಡಿ, ಆರ್ ಟಿಓ ವಿಶಾಲ ಜಿ.ಪಿ, ಯುವ ನಾಯಕ ಚಿದಾನಂದ ಸವದಿ, ಕೆಪಿಸಿಸಿ ಸದಸ್ಯ ಶಾಮರಾವ್ ಪೂಜಾರಿ, ಸುರೇಶ ಮಾಯಣ್ಣವರ, ಶಾಂತಿನಾಥ ನಂದೇಶ್ವರ ಸೇರಿದಂತೆ ಹಲವರು ಉಪಸ್ಥಿತರಿದ್ದರು,