ಅ. 21, 22 ರಂದು ಬಸವಕಲ್ಯಾಣದಲ್ಲಿ ದ್ವಿತೀಯ ಸ್ವಾಭಿಮಾನಿ ಕಲ್ಯಾಣ ಪರ್ವಹತ್ತು ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ : ಚನ್ನಬಸವಾನಂದ ಶ್ರೀ

ಬೀದರ: ಸೆ.23:ಬಸವ ಧರ್ಮ ಪೀಠದ ಸ್ವಾಭಿಮಾನಿ ಶರಣರ ಬಣದಿಂದ ಬರುವ ಅಕ್ಟೋಬರ್ 21 ಮತ್ತು 22 ರಂದು ಎರಡು ದಿವಸಗಳ ಕಾಲ ಬಸವಕಲ್ಯಾಣದ ಬೇಗ್ ಸಭಾ ಮಂಟಪದಲ್ಲಿ ದ್ವಿತೀಯ ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜನೆ ಮಾಡಲಾಗಿದೆ ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದ್ದಾರೆ. ಪೂಜ್ಯರು ಇಂದು ಬೀದರ ನಗರದ ಬಸವ ಮಂಟಪದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿಯವರು ಎಲ್ಲಾ ಜಂಗಮ ಮೂರ್ತಿಗಳು ಹಾಗೂ ಶರಣರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿ ಧೋರಣೆ ನಡೆಸುತ್ತಿರುವುದರಿಂದ ಕಳೆದ ವರ್ಷವಂತೂ ರಾಜಿಯಾಗಿ ಒಂದೇ ಕಲ್ಯಾಣ ಪರ್ವ ಮಾಡುತ್ತೇವೆಂದು ಕೊನೆಗೆ ಮೋಸ ಮಾಡಿದ್ದರಿಂದ ಪ್ರತ್ಯೇಕ ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಿಸಬೇಕಾಯಿತು. ಈಗಲೂ ಸಹ ಪ್ರತ್ಯೇಕವಾದ ಕಲ್ಯಾಣ ಪರ್ವ ಮಾಡುವ ಅನಿವಾರ್ಯತೆ ಬಂದಿದೆ. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಶರಣರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬರುವ ಭಕ್ತರಿಗೆ ಪ್ರಸಾದ ಮತ್ತು ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಪರ್ವದ ಯಶಸ್ವಿಗಾಗಿ ಸ್ವಾಭಿಮಾನಿ ಕಲ್ಯಾಣ ಪರ್ವ ಸಮಿತಿ ರಚಿಸಲಾಗಿದೆ. ಸಾರ್ವಜನಿಕರು ತನು ಮನ ಧನದಿಂದ ಸಹಕರಿಸಬೇಕೆಂದು ಸ್ವಾಮೀಜಿ ಹೇಳಿದರು. ಅಲ್ಲದೇ ಯಾವುದೇ ಜಾತಿ ಮತ ಪಂಥಗಳ ಭೇದವಿಲ್ಲದೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಂದು ಕಲ್ಯಾಣ ಪರ್ವದಲ್ಲಿ ಪಾಲ್ಗೊಳ್ಳಿ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದಲೂ ಶರಣರು ಆಗಮಿಸಲಿದ್ದಾರೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.
ನಮ್ಮ ಹಾಗೂ ಬಸವ ಧರ್ಮ ಪೀಠದ ನಡುವಿನ ವ್ಯಾಜ್ಯವನ್ನು ಪೂಜ್ಯ ಗಂಗಾಮಾತಾಜಿಯವರು ದೆಹಲಿಯ ಸುಪ್ರಿಂ ಕೋರ್ಟ್‍ವರೆಗೂ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಅಂತೀಮ ತೀರ್ಪು ಬರುವವರೆಗೆ ನಾವು ಸಂಧಾನ ಮಾಡಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ. ಆದ್ದರಿಂದ ನಾವು ಪ್ರತ್ಯೇಕವಾಗಿಯೇ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಮಾತಾಜಿ ನಿಷ್ಠ ಹಾಗೂ ಲಿಂಗಾನಂದ ಮಹಾಸ್ವಾಮೀಜಿಯವರ ಹಿರಿಯ ಶಿಷ್ಯರ ಸಮೂಹ ಮತ್ತು ರಾಷ್ಟ್ರೀಯ ಬಸವ ದಳದವರು ತೀರ್ಮಾನಿಸಿದ್ದೇವೆ ಎಂದರು.
ಬೀದರ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ ಮಾತನಾಡಿ ಬಸವ ಧರ್ಮ ಪೀಠ ಬಿಟ್ಟು ನಾವು ಎಂದೂ ಹೊರಗೆ ಹೋಗಿಲ್ಲ. ಆದರೆ ಗಂಗಾದೇವಿಯವರು ನಮ್ಮನ್ನು ದೂರ ಮಾಡುತ್ತಿದ್ದಾರೆ. ಅವರ ಉದ್ದೇಶವೇನಿದೆ ನಮಗೆ ಗೊತ್ತಿಲ್ಲ. ಅವರ ಆಹ್ವಾನದ ಮೇರೆಗೆ ಸೆ. 19 ರಂದು ಕಲ್ಯಾಣ ಪರ್ವದ ಪೂರ್ವಸಿದ್ದತಾ ಸಭೆಗೆ ಬೀದರನಿಂದ ಸುಮಾರು 25 ಜನರು ಹಾಗೂ ಬೇರೆ ಬೇರೆ ಕಡೆಗಳಿಂದ ಸುಮಾರು 60ಕ್ಕೂ ಹೆಚ್ಚು ಜನರು ಬಸವಕಲ್ಯಾಣದ ಬಸವ ಮಹಾಮನೆಗೆ ಹೋಗಿದ್ದೇವು. ಆದರೆ ಆಶ್ರಮದಲ್ಲಿರುವ ಸಿದ್ಧರಾಮೇಶ್ವರ ಎಂಬ ಸ್ವಾಮಿಗಳು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ನೂರಾರು ಜನ ಪೊಲೀಸರನ್ನು ಕರೆಸಿ ನಮ್ಮನ್ನು ಒಳಗೆ ಹೋಗದಂತೆ ತಡೆದರು. ಮಾತ್ರವಲ್ಲದೆ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು. ನಾವೇನು ಭಯೋತ್ಪಾದಕರಾ? ಮೂರು ದಶಕಗಳಿಂದ ನಾವೇ ಕಟ್ಟಿ ಬೆಳೆಸಿದ ಆಶ್ರಮದೊಳಗೆ ನಾವೇ ಹೋಗಬಾರದೆ? ಎಂದು ಮಾತಾಜಿ ಪ್ರಶ್ನೆ ಮಾಡಿದರು.
ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಮಾತನಾಡಿ ಪೂಜ್ಯ ಗಂಗಾಮಾತಾಜಿಯವರು ಒಂದಾಗಬೇಕೆಂದರೂ ಸಿದ್ರಾಮೇಶ್ವರ ಎಂಬ ಸ್ವಾಮಿಗಳು ಸೇರಿದಂತೆ ಇನ್ನೂ ಕೆಲವರು ನೂತನವಾಗಿ ಬಸವ ಧರ್ಮ ಪೀಠಕ್ಕೆ ಕಾಲಿಟ್ಟವರು ಒಂದಾಗಲು ಬಿಡುತ್ತಿಲ್ಲ. ಆಶ್ರಮದಿಂದ ಸಿದ್ಧರಾಮೇಶ್ವರ ಎಂಬ ಸ್ವಾಮಿಗಳನ್ನು ಹೊರಹಾಕಿದಾಗ ಎಲ್ಲರೂ ಒಂದಾಗಿ ಮತ್ತೆ ಶಾಂತಿ ನೆಲೆಸಬಹುದು. ಹೀಗಾಗಿ ಸುಮಾರು ಮೂರ್ನಾಲ್ಕು ದಶಕಗಳಿಂದ ಸಂಸ್ಥೆಗಾಗಿ ದುಡಿಯುತ್ತಿರುವ ಬಹುತೇಕ ಶರಣರು ನಮ್ಮೊಂದಿಗಿದ್ದಾರೆ. ಆದ್ದರಿಂದ ಎರಡನೇ ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜನೆ ಮಾಡುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.
ನಾವು ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ನಿರ್ಮಾಣವಾದ 108 ಬಸವ ಮೂರ್ತಿಗೆ ಹಾಗೂ ಸಭಾಮಂಟಪ ನಿರ್ಮಾಣಕ್ಕೆ ಸಾಕಷ್ಟು ಹಣ ನೀಡಿದ್ದೇವೆ. ಆದರೆ ನಮ್ಮ ಮೇಲಿನ ದ್ವೇಷದಿಂದ ಸಿದ್ಧರಾಮೇಶ್ವರ ಎಂಬ ಸ್ವಾಮಿಗಳು ಅಲ್ಲಿರುವ ಕೋಣೆಗಳ ಮೇಲಿನ ಮತ್ತು ಬಸವ ಪುತ್ಥಳಿ ಎದುರುಗಡೆ ಇರುವ ಶಿಲೆಯ ಮೇಲಿನ ಹೆಸರುಗಳನ್ನು ತೆಗೆದುಹಾಕಿ ಭಕ್ತರಿಂದ ಡಬಲ್ ಹಣ ಪಡೆದು ನಮ್ಮ ಹೆಸರುಗಳನ್ನು ಒಂದೊಂದಾಗಿ ತೆಗೆಸಿ, ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಬೀದರ ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ, ಮಲ್ಲಿಕಾರ್ಜುನ ಜೈಲರ್, ಬಸವಂತರಾವ ಬಿರಾದಾರ, ಮಲ್ಲಿಕಾರ್ಜುನ ಶಹಾಪುರ, ಓಂಪ್ರಕಾಶ ರೊಟ್ಟೆ, ರವಿಕಾಂತ ಬಿರಾದಾರ, ನಿರ್ಮಲಾ ನಿಲಂಗೆ, ವಿದ್ಯಾವತಿ ನಿಡಗುಂದೆ, ಜಗದೀಶ್ವರ ಬಿರಾದಾರ, ಸುನಿತಾ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.