ಅ.2, 3ರಂದು ಬಳ್ಳಾರಿ ರಾಘವರವರ ರಾಜ್ಯ, ಜಿಲ್ಲಾ ಪ್ರಶಸ್ತಿ ಪ್ರದಾನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.28: ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರವರ 142ನೇ ಜಯಂತಿಯ ಅಂಗವಾಗಿ ಆ.2 ಮತ್ತು 3ರಂದು ಬಳ್ಳಾರಿ ರಾಘವರ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ರಾಘವ ಮೆಮೋರಿಯಲ್ ಅಸೋಸಿಯೇಷನ್ ನವರು ತಿಳಿಸಿದ್ದಾರೆ.
  ಆಗಸ್ಟ್ 2 ರಂದು
ಆ.2 ಮಂಗಳವಾರ ಸಂಜೆ 5.00 ಗಂಟೆಗೆ ಮೆರವಣಿಗೆ ಮೂಲಕ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿರುವ ಬಳ್ಳಾರಿ ರಾಘವ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ನಂತರ 6.30 ಗಂಟೆಗೆ ನಗರದ ರಾಘವ ಕಲಾಮಂದಿರದಲ್ಲಿ ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರ 142ನೇ ಜಯಂತಿ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಡಾ|| ಆಕಾಶ್ ಶಂಕರ್, ಮಾನ್ಯ ಸಹಾಯಕ ಆಯುಕ್ತರು, ಬಳ್ಳಾರಿ ರವರು ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಸಿದ್ದಲಿಂಗೇಶ ಕೆ.ರಂಗಣ್ಣವರ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷರಾದ ಕೆ.ಚನ್ನಪ್ಪ ಅವರು ವಹಿಸಲಿದ್ದಾರೆ. ಕನ್ನಡ ರಂಗಭೂಮಿ ಸೇವೆ ಸಲ್ಲಿಸಿದವರಿಗೆ ರಾಘವ ರಾಜ್ಯ ಪ್ರಶಸ್ತಿಯನ್ನು ಧಾರವಾಡದ ಶ್ರೀ ಕೊಟ್ರೇಶ ಶಿವಪ್ಪ ಅಂಗಡಿ ಅವರಿಗೆ ಮತ್ತು ಜಿಲ್ಲಾ ಪ್ರಶಸ್ತಿಗಳನ್ನು ಪದ್ಮಾ ಕೂಡ್ಲಿಗಿ ಮತ್ತು ಮುದೇನೂರು ಉಮಾಮಹೇಶ್ವರ ಹೊಸಪೇಟೆ ಇವರುಗಳಿಗೆ ಪ್ರದಾನ ಮಾಡಲಾಗುವುದು.
ತದನಂತರ ಲಲಿತ ಕಲಾರಂಗ ಮರಿಯಮ್ಮನಹಳ್ಳಿ ಇವರಿಂದ ಕಿರಂ ನಾಗರಾಜ ರಚನೆಯ ಹಾಗೂ ಸಿ.ಕೆ.ನಾಗರಾಜ ಇವರ ನಿರ್ದೇಶನದಲ್ಲಿ ಕಾಲಜ್ಞಾನಿ ಕನಕ ಎಂಬ ಕನ್ನಡ ನಾಟಕವನ್ನು ಪ್ರದರ್ಶನ ನೀಡಲಿದ್ದಾರೆ.
 ಆಗಸ್ಟ್ 3ರಂದು
ಆ.3 ಬುಧವಾರ ಸಂಜೆ 6.30 ಗಂಟೆಗೆ ರಾಘವ ಕಲಾಮಂದಿರದಲ್ಲಿ ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ರಾಜೇಶ್ವರಿ ಸುಬ್ಬರಾಯುಡು ಮತ್ತು ಹೈದರಾಬಾದ್‍ನ ಗಜಲ್ ರಚಯುತ, ಸೀನಿಯರ್ ಜರ್ನಲಿಸ್ಟ್ ಶ್ರೀ ಬಿಕ್ಕಿ ಕೃಷ್ಣ ಅವರುಗಳು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಕೋಟೇಶ್ವರರಾವು ಅವರು ವಹಿಸಲಿದ್ದಾರೆ. ತೆಲುಗು ರಂಗಭೂಮಿ ಸೇವೆ ಸಲ್ಲಿಸಿದವರಿಗೆ ರಾಘವ ರಾಜ್ಯ ಪ್ರಶಸ್ತಿಯನ್ನು ಶ್ರೀಕಾಕುಳಂನ ಶ್ರೀ ಗೋಕವಲಸ ಕೃಷ್ಣಮೂರ್ತಿ ಬಳ್ಳಾರಿ ರಾಘವರವರ ಜಿಲ್ಲಾ ಪ್ರಶಸ್ತಿಯನ್ನು ಬಳ್ಳಾರಿಯ ಶ್ರೀ ಕೆ.ಕಾಳಿದಾಸ ಮತ್ತು ಕರ್ನೂಲು ಜಿಲ್ಲೆ ಕೌತಾಳಂನ ಶ್ರೀ ಕೆ.ಮಾರುತಿ ಮೋಹನ ಇವರುಗಳಿಗೆ ಪ್ರದಾನ ಮಾಡಲಾಗುವುದು.
ತದನಂತರ ಸದ್ಗುರು ಕಳಾ ನಿಲಯಂ ಗುಂಟೂರು ಇವರಿಂದ ದಿ|| ಶಿಷ್ಟ್ಲಾ ಚಂದ್ರಶೇಖರ ರಚನೆಯ ಹಾಗೂ ಶ್ರೀ ಕೆ.ವಿ.ಪ್ರಸಾದ್ ಇವರ ನಿರ್ದೇಶನದಲ್ಲಿ ಬಹುರೂಪಿ ಎಂಬ ತೆಲುಗು ಸಾಮಾಜಿಕ ನಾಟಕವನ್ನು ಪ್ರದರ್ಶನ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.