ಕಲಬುರಗಿ,ಸೆ.30: ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ಟೌನ್ ಹಾಲ್ ಗಾಂಧಿ ಪ್ರತಿಮೆಯ ಸಮ್ಮುಖದಲ್ಲಿ ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರ ಜಯಂತಿಯ ನಿಮಿತ್ಯ ಅಕ್ಟೋಬರ್ 2ರಂದು ಬೆಳಿಗ್ಗೆ 9-30ಕ್ಕೆ ನಶಾ ನಿಷೇಧಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ನಶಾ ಮುಕ್ತ ಭಾರತ ಜಾಗೃತಿ ಆಂದೋಲನ ಸಮಿತಿಯ ಪ್ರೊ. ಆರ್.ಕೆ. ಹುಡಗಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ನಾಡಿನ ಮಠಾಧೀಶರು ಮತ್ತು ಆಳಂದ್ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ ಅವರು ಪಾಲ್ಗೊಳ್ಳುವರು ಎಂದರು.
ಕುಡಿತಕ್ಕೆ ಅಂಟಿಕೊಳ್ಳುವವರು ರಕ್ಕಸರಾಗುತ್ತಾರೆ. ತನ್ನ ಚಟದ ದಾಸನಾಗುತ್ತಾನೆ. ಎಲ್ಲ ಅಪರಾಧಗಳ ಮೂಲ ಸೆಲೆಯಾಗುತ್ತಾನೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮತ್ತು ಬರಿಸುವ ಮದಿರೆ ಮತ್ತು ಮದ್ದುಗಳು, ಮಾನವನು ಸೃಷ್ಟಿಸಿಕೊಂಡಿರುವ ಸ್ವಯಂ ನಾಶದ ಪಾನೀಯ ಮತ್ತು ಪದಾರ್ಥಗಳಾಗಿವೆ ಎಂದು ತಿಳಿಸಿದರು.
ನಶಾ ಪ್ರಚೋದಕ ಪಾನೀಯ ಮತ್ತು ಪದಾರ್ಥಗಳ ಹಾದಿ ಕೇವಲ ಅವುಗಳ ಚಟ ಅಂಟಿಸಿಕೊಂಡ ವ್ಯಕ್ತಿಗೆ ಮಾತ್ರ ಸೀಮಿತವಾಗಿಲ್ಲ. ಅದು ಕುಟುಂಬ, ಅವನ ಸಮುದಾಯ, ಊರು ಮತ್ತು ಆ ಮೂಲಕ ಇಡೀ ದೇಶದ ಸಾಮಾಜಿಕ ನೆಮ್ಮದಿ ಹಾಗೂ ಆರ್ಥಿಕ ಸುಸ್ಥಿತಿಯನ್ನು ಅಸ್ತವ್ಯಸ್ತಗೊಳಿಸುತ್ತದೆ. ತತ್ಪರಿಣಾಮವಾಗಿ ವ್ಯಕ್ತಿ ಮತ್ತು ಸಮಾಜದ ಆರೋಗ್ಯ ಸಾಮಾಜಿಕ ನೆಮ್ಮದಿ ಹಾಗೂ ಬಡತನದ ಆವಸ್ಥೆಯನ್ನು ಇನ್ನಷ್ಟು ಹದಗೆಡಿಸಿ ನಿತ್ಯ ನಿರಂತರ ಯಾತನೆಯ ವಾಸ್ತವ ನರಕವನ್ನೇ ಸೃಷ್ಟಿಸುತ್ತದೆ ಎಂದು ಅವರು ಎಚ್ಚರಿಸಿದರು.
ಮಾದಕ ವ್ಯಸನಿಗಳ ಕುಟುಂಬದ ಕೌಟುಂಬಿಕ ಸಂಬಂಧಗಳು ಮೂರಾಬಟ್ಟೆಯಾಗುತ್ತಿವೆ. ಅಮಲಿನ ವಶದಲ್ಲಿ ಬುದ್ದಿ ಹೀನನಾಗುವ ವ್ಯಕ್ತಿ ಕಾಲು ಕೆದರಿ ಜಗಳ, ತಂಟೆಗೆ ತೊಡಗುವುದು ಸಹಜ. ಆದ್ದರಿಂದ ಸಾಮುದಾಯಿಕ ಸಂಬಂಧ ಹಾಳಾಗಿ ಹೊಡೆದಾಟ ಹಾಗೂ ಕೊಲೆಗಳಂತಹ ಅಪರಾಧಕ್ಕೂ ದಾರಿ ಮಾಡಿಕೊಡುವುದುಂಟು. ಮಕ್ಕಳ ಶಿಕ್ಷಣ, ಆರೋಗ್ಯ ಹಾಳಾಗಿ ಹೋಗುತ್ತದೆ ಎಂದು ಅವರು ಹೇಳಿದರು.
ನಶಾ ಪ್ರಚೋದಕ ಪಾನೀಯ ಮತ್ತು ಪದಾರ್ಥಗಳು ಎಷ್ಟೆಲ್ಲ ಹಾನಿಯುಂಟು ಮಾಡುತ್ತಿದ್ದರೂ ಸಹ ಅವನ್ನು ಕಟ್ಟುನಿಟ್ಟಾಗಿ ನಿಷೇಧಿಸಿಲ್ಲ ಎಂದು ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಮದ್ಯವ್ಯಸನಿ ತನ್ನ ಆರೋಗ್ಯ ಹಾಳು ಮಾಡಿಕೊಂಡರೆ, ಅದರ ಭಾರೀ ಪರಿಣಾಮವನ್ನು ಅವನ ಪತ್ನಿ ಮತ್ತು ಮಕ್ಕಳು ಎದುರಿಸುತ್ತಾರೆ. ಬಹುಸಂಖ್ಯಾತ ಬಡ ಮಹಿಳೆಯರು ದುಡಿದು ಮನೆ ನಡೆಸಿದರೆ, ಮಕ್ಕಳ ಪಾಲನೆ ಪೋಷಣೆಯ ಹೊರೆ ಹೊತ್ತರೆ, ಅಂತಹ ಮನೆಗಳ ಅಗಣಿತ ಪುರುಷರು ತಾವು ದುಡಿದದ್ದನ್ನೇ ಕುಡಿತಕ್ಕೆ ಖರ್ಚು ಮಾಡುವರು. ಹಾಗಾಗಿ ನಶಾ ಮುಕ್ತ ಭಾರತ ಆಂದೋಲನವನ್ನು ರಾಷ್ಟ್ರವ್ಯಾಪಿಯಾಗಿ ಮೇಧಾ ಪಾಟ್ಕರ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಅದರ ಆರಂಭವನ್ನು ನಗರದಿಂದಲೇ ಪ್ರಾರಂಭಿಸಲಾಗುತ್ತದೆ. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು, ಅದರಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ರಾಜಶೇಖರ್ ಪಾಟೀಲ್ ಹೆಬಳಿ, ಬಿ.ಎನ್. ಪಾಟೀಲ್, ರಾಜಶೇಖರ್ ಪಾಟೀಲ್ ಹೆಬಳಿ, ಶಹಜಾನ್ ಅಖ್ತರ್, ರವಿ ಶಾಬಾದಿ ಮುಂತಾದವರು ಉಪಸ್ಥಿತರಿದ್ದರು.