ಅ.19ರಿಂದ ಸಿಬಿಎಸ್‍ಇ ವಲಯ ಸ್ಕೇಟಿಂಗ್ ಸ್ಪರ್ಧೆ

ಕಲಬುರಗಿ: ಅ.16:ನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವತಿಯಿಂದ ಇದೇ 19 ರಿಂದ 22ರವರೆಗೆ ಸಿಬಿಎಸ್‍ಇ ವಲಯ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ನ್ಯಾಷನಲ್ ಪಬ್ಲಿಕ್ ಶಾಲೆಯ ಚೇರ್ಮನ್ ಹಾಗೂ ವಿಧಾನ ಪರಿಷತ್ ಸದಸ್ಯ ಶಶಿ ಲ್ ಜಿ.ನಮೋಶಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಸ್ಕೇಟಿಂಗ್ ಸ್ಪರ್ಧೆ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆಯಲಿದ್ದು, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದ ಸುಮಾರು 3000ಕ್ಕೂ ಅಧಿಕ ಸ್ಪರ್ಧಾಳುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಎನ್‍ಪಿಎಸ್ ಕಲಬುರಗಿ ಶಾಖೆಯ ಶಾಲೆಯಲ್ಲಿರುವ ಅತ್ಯುತ್ತಮ ಮೂಲಸೌಕರ್ಯ ಗುರುತಿಸಿ ದೆಹಲಿಯ ಸಿಬಿಎಸ್‍ಇ ಬೋರ್ಡ್ ಶಾಲೆಯಲ್ಲಿ ಸ್ಕೇಟಿಂಗ್ ಸ್ಪರ್ಧೆ ಆಯೋಜಿಸಲು ಅವಕಾಶ ಕೊಟ್ಟಿದೆ. 300 ಮೀ., 500 ಮತ್ತು 1000 ಮೀ. ಸ್ಪರ್ಧೆಗಳು ನಡೆಯಲಿದ್ದು, ವಿಜೇತ ಸ್ಪರ್ಧಾರ್ಥಿಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. 19 ವರ್ಷದೊಳಗಿನ ಸ್ಪರ್ಧಾಳುಗಳು ಈ ಸ್ಕೇಟಿಂಗ್‍ನಲ್ಲಿ ಭಾಗವಹಿಸಬಹುದು. ಕಲಬುರಗಿಯ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವತಿಯಿಂದ ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಸಚಿವ ಖೂಬಾ ಉದ್ಘಾಟನೆ:
ಈ ಸ್ಕೇಟಿಂಗ್ ಸ್ಪರ್ಧೆಯನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಕೆಬಿಆರ್‍ಡಿ ಅಧ್ಯಕ್ಷ ಡಾ.ಅಜಯಸಿಂಗ್, ಸಂಸದ ಡಾ.ಉಮೇಶ್ ಜಾಧವ, ಅಂತಾರಾಷ್ಟ್ರೀಯ ಕ್ರೀಡಾಪಟು ಸೌಜನ್ಯ ಎಂ. ಪಾಲ್ಗೊಳಲಿದ್ದಾರೆ ಎಂದು ನಮೋಶಿ ಮಾಹಿತಿ ಹಂಚಿಕೊಂಡರು.
ಚಂದ್ರಶೇಖರ ರೆಡ್ಡಿ, ಸಂಗಮೇಶ್ವರ, ಮೊಹಿನುದ್ದೀನ್, ಸುರೇಶ್ ಬುಲ್‍ಬುಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.