ಅ.14 ಮತ್ತು 15ರಂದು ಕೆಲ್ಲೂರು ಆದಿಶಕ್ತಿ ಗೌರಮ್ಮ ತಾಯಿ ಜಾತ್ರಾ ಮಹೋತ್ಸವ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಸೆ.25:- ತಾಲ್ಲೂಕಿನ ಕೆಲ್ಲೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಆದಿಶಕ್ತಿ ಗೌರಮ್ಮತಾಯಿ ಜಾತ್ರಾ ಮಹೋತ್ಸವ ಅಕ್ಟೋಬರ್ 14 ಮತ್ತು 15 ರಂದು ನಡೆಯಲಿದೆ.
ಪ್ರತಿ ವರ್ಷ ಗೌರಿ ಗಣೇಶ ಹಬ್ಬ ಬಂತೆಂದರೆ ತಿಂಗಳ ಕಾಲ ದೇವಾಲಯ ಆವರಣದಲ್ಲಿ ಜಾತ್ರೆ ನಡೆಯುವುದು ಗ್ರಾಮದ ವಿಶೇಷವಾಗಿದೆ, ಎಲ್ಲ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ನಡೆಸಿ ವಿಸರ್ಜನೆ ಮಾಡಿದರೆ ಈ ಗ್ರಾಮದ ದೇವಾಲಯದಲ್ಲಿ ಶ್ರೀ ಆದಿಶಕ್ತಿ ಗೌರಮ್ಮ ತಾಯಿಯನ್ನು ಪ್ರತಿಷ್ಠಾಪಿಸಿ ತಿಂಗಳುಗಳ ಕಾಲ ವಿಶೇಷವಾಗಿ ಪೂಜಿಸಿ ಭಕ್ತಾದಿಗಳಿಗೆ ಪ್ರತಿ ನಿತ್ಯ ಸೇವಾರ್ಥದಾರರು ಹಾಗೂ ದಾಸೋಹ ಸಮಿತಿ ವತಿಯಿಂದ ಅನ್ನಸಂತರ್ಪಣೆ ನಡೆಸಲಾಗುತ್ತದೆ, ಈ ವೇಳೆ ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆಗಳಿಂದ ಭಕ್ತಾದಿಗಳು ಆಗಮಿಸಿ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸುತ್ತಾರೆ, ವಿಸರ್ಜನಾ ಮಹೋತ್ಸವದ ಹಿಂದಿನ ದಿನ ಹಾಗೂ ವಿಸರ್ಜನೆಯೆಂದು ಸಾವಿರಾರು ಸಂಖ್ಯೆಯ ಭಕ್ತಾದಿಗಳು ದೇವರ ದರ್ಶನ ಪಡೆಯುತ್ತಾರೆ.
ತೊಡಿಗೆ ದಿನದಂದು ರಾತ್ರಿವರೆಗೆ ಪ್ರವೇಶ ನಿರ್ಬಂಧ:
ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಸೆಪ್ಟೆಂಬರ್ 26 ರ ಮಂಗಳವಾರ ಮೊದಲ ತೊಡಿಗೆ ಹಾಗೂ ಅಕ್ಟೋಬರ್ 7 ರ ಶನಿವಾರ ಎರಡನೇ ತೊಡಿಗೆ ಇದ್ದು ಬೆಳಿಗ್ಗೆಯಿಂದ ರಾತ್ರಿ 9 ರ ತನಕ ದೇವಾಲಯದ ಬಾಗಿಲು ಮುಚ್ಚಿರುತ್ತದೆ ಬಳಿಕ ಭಕ್ತಾದಿಗಳಿಗೆ ದೇವಾಲಯ ಪ್ರವೇಶಕ್ಕೆ ಅವಕಾಶವಿದೆ.
ವಿಶೇಷ ಮೆರವಣಿಗೆ: ಅಕ್ಟೋಬರ್ 14 ರಂದು ಬೆಳಿಗ್ಗೆ ಕಳಸ ಧ್ವಜಾರೋಹಣ ನಂತರ ಸಂಜೆಯವರೆಗು ವಿಶೇಷ ಪೂಜೆ ನಡೆಸಿ ತಡರಾತ್ರಿ ವಿಶೇಷವಾದ ಹೂ ಹಾಗೂ ವಿದ್ಯುತ್ ಅಲಂಕೃತ ಮಂಟಪಕ್ಕೆ ಶ್ರೀ ಆದಿಶಕ್ತಿ ಗೌರಮ್ಮ ತಾಯಿಯನ್ನು ಪ್ರತಿಷ್ಠಾಪಿಸಿ ಗ್ರಾಮದ ರಾಜ ಬೀದಿಗಳಲ್ಲಿ ಮಂಗಳವಾದ್ಯ ವೀರಗಾಸೆ ನಗಾರಿ ಡೊಳ್ಳು ಕುಣಿತ ನಂದಿಧ್ವಜ ಮೆರವಣಿಗೆಯಲ್ಲಿ ಸಾಗಿ ಅಕ್ಟೋಬರ್ 15 ರಂದು ಬೆಳಗ್ಗೆ 9 ಗಂಟೆ ಸಮಯಕ್ಕೆ ಗ್ರಾಮದ ಅಮ್ಮನಕಟ್ಟೆ ಯಲ್ಲಿ ವಿಸರ್ಜಿಸಲಾಗುತ್ತದೆ, ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಆದಿಶಕ್ತಿ ಗೌರಮ್ಮ ತಾಯಿ ಕೃಪೆಗೆ ಪಾತ್ರರಾಗುವಂತೆ ಗ್ರಾಮದ ಯಜಮಾನರು ಮುಖಂಡರು ದೇವಾಲಯ ಹಾಗೂ ದಾಸೋಹ ಸಮಿತಿ ಪದಾಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.