ಅ. 1 ರಿಂದ ಶೌರ್ಯ ಜಾಗರಣ ರಥಯಾತ್ರೆ


ಹುಬ್ಬಳ್ಳಿ, ಸೆ 26: ವಿಶ್ವ ಹಿಂದು ಪರಿಷದ್ ಬಜರಂಗದಳ ಕರ್ನಾಟಕ ಉತ್ತರ ಪ್ರಾಂತದ ವತಿಯಿಂದ ಶೌರ್ಯ ಜಾಗರಣ ರಥಯಾತ್ರೆಯನ್ನು ಧಾರವಾಡ ಜಿಲ್ಲೆಯಲ್ಲಿ ಅಕ್ಟೋಬರ್ 1 ರಿಂದ 16 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷದ್‍ನ ಉತ್ತರ ಕರ್ನಾಟಕ ಪ್ರಾಂತ ಸಂಯೋಜಕ ಪುಂಡಲೀಕ ದಳವಾಯಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷದ್ 60 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಕರ್ನಾಟಕ ಉತ್ತರ ಪ್ರಾಂತದಲ್ಲಿ ಏಳು ರಥಗಳಾಗಿ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳ ಮೂಲಕ ಹಾದು ಹೋಗುವಂತೆ ಆಯೋಜಿಸಿರುವ ಈ ರಥಯಾತ್ರೆಯು ಕಲಬುರ್ಗಿ, ಮಾನವಿ, ಶಿರಸಿ, ವಿಜಯಪುರ, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಈ ರಥಯಾತ್ರೆ ಸಂಪನ್ನಗೊಳ್ಳಲಿದೆ.

ಅಕ್ಟೋಬರ್ 1 ರಂದು ಧಾರವಾಡ ತಾಲೂಕಿನ ಗರಗ ಗ್ರಾಮದ ಮಡಿವಾಳೇಶ್ವರ ದೇವಸ್ಥಾನದಿಂದ ಶೌರ್ಯ ಜಾಗರಣ ರಥಯಾತ್ರೆ ಆರಂಭವಾಗಲಿದ್ದು, ವಿವಿಧೆಡೆ ರಥಯಾತ್ರೆ ಸಂಚರಿಸಿ ಅಕ್ಟೋಬರ್ 7 ರಂದು ನಗರದ ಶ್ರೀ ಸಿದ್ಧಾರೂಢರ ಮಠಕ್ಕೆ ರಥಯಾತ್ರೆ ಆಗಮಿಸಲಿದ್ದು ಹು-ಧಾ ಮಹಾನಗರ ವಿವಿಧ ವಾರ್ಡ್‍ಗಳಲ್ಲಿ ಅಕ್ಟೋಬರ್ 13 ರವರೆಗೆ ರಥಯಾತ್ರೆ ಸಂಚಾರ ಮಾಡಲಿದೆ. ಅಕ್ಟೋಬರ್ 14 ರಂದು ನೆಹರು ಮೈದಾನದಲ್ಲಿ ಬೃಹತ್ ಹಿಂದೂ ಸಮಾವೇಶ ನಡೆಸುವ ಮೂಲಕ ಶೌರ್ಯ ಜಾಗರಣ ರಥಯಾತ್ರೆ ಸಂಪನ್ನಗೊಳ್ಳಲಿದೆ. ಅಂದು ವಿವಿಧ ಸಾಧು-ಸಂತರು ಸೇರಿದಂತೆ ಮೊದಲಾದ ಗಣ್ಯರು ಆಗಮಿಸಲಿದ್ದಾರೆ ಎಂದರು.

ರಾಮನಗೌಡ್ರ, ಪುಂಡಲೀಕ ದಳವಾಯಿ, ವಿನಾಯಕ ತಲಗೇರಿ, ಬಸವರಾಜ್ ಕೌಜಲೇಗಿ, ಶಿವಾನಂದ ಸತ್ತಿಗೇರಿ, ಮಹೇಶ್ ಪಾಟೀಲ್ ಉಪಸ್ಥಿತರಿದ್ದರು.