ಅ. ೧೯ ನ್ಯಾಯಬೆಲೆ ಅಂಗಡಿ ಬಂದ್

ಬೆಂಗಳೂರು, ಅ.೧೭-ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ. ಅಕ್ಕಿಗೆ ನೇರ ನಗದು ಸೌಲಭ್ಯ ಕಲ್ಪಿಸುವುದನ್ನು ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ಡಿಬಿಟಿ ಮೊತ್ತಕ್ಕೆ ನಮಗೆ ಕಮೀಷನ್ ಗೆ ಆಗ್ರಹಿಸಿ ಅಕ್ಟೋಬರ್ ೧೯ ರಂದು ನ್ಯಾಯಬೆಲೆ ಅಂಗಡಿಗಳನ್ನು ಒಂದು ದಿನದ ಸಾಂಕೇತಕವಾಗಿ ಬಂದ್ ಮಾಡಲು ರಾಜ್ಯ ಪಡಿತರ ವಿತರಕರ ಸಂಘ ನಿರ್ಧರಿಸಿದೆ.
ಈ ಸಂಬಂಧ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಐದು ಕೆ.ಜಿ. ಅಕ್ಕಿ ಬದಲಿಗೆ ನಗದು ಸೌಲಭ್ಯ ಕಲ್ಪಿಸುತ್ತಿರುವುದರಿಂದ ನಮಗೆ ದೊರೆಯಬೇಕಾದ ಕಮೀಷನ್ ಹಣದಿಂದ ವಂಚಿತರಾಗುತ್ತಿದ್ದೇವೆ ಎಂದು ಬೆಂಗಳೂರು ನಗರ ಸರ್ಕಾರಿ ಪಡಿತರ ವಿತರಕರ, ಸಂಘ ಪಡಿತರ ವಿತರಕರ ಸಂಘ ಅಧ್ಯಕ್ಷ ಜೆ ಬಿ ಕುಮಾರ್ ಆಗ್ರಹಿಸಿದ್ದಾರೆ.
ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಆರನೇ ತಿಂಗಳಿಗೆ ಕಾಲಿಟ್ಟಿದ್ದು, ನಗದು ಬದಲು ಹತ್ತು ಕೆ.ಜಿ. ಅಕ್ಕಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದು, ನಮಗೆ ಅಹವಾಲಿಗೆ ಸ್ಪಂದನೆ ದೊರೆತಿಲ್ಲ.
ಸೌಜನ್ಯಕ್ಕಾದರೂ ಸರ್ಕಾರ ನಮ್ಮ ಸಂಘಟನೆಗಳೊಂದಿಗೆ ಚರ್ಚಿಸಿಲ್ಲ. ಪಡಿತರ ವಿತರಕರ ಬಗ್ಗೆ ಕಾಳಜಿವಹಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.