ಅ.ರಾ. ಪ್ರಯಾಣಿಕರಿಗೆ ಕಂಟೈನ್ಮೆಂಟ್ ವಿಸ್ತರಣೆ

ನವದೆಹಲಿ,ಡಿ.೨- ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಒಮಿಕ್ರಾನ್ ರೂಪಾಂತರಿ ತಳಿ ಹಾವಳಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಈ ತಿಂಗಳ ೩೧ರವರೆಗೂ ಕಂಟೈನ್ಮೆಂಟ್ ಕ್ರಮಗಳನ್ನು ವಿಸ್ತರಿಸಿದೆ.
ಇದರ ಜತೆಗೆ ಕೇಂದ್ರಾಡಳಿತ ಮತ್ತು ರಾಜ್ಯ ಸರ್ಕಾರಗಳು ರೂಪಾಂತರಿ ತಳಿ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸೂಚಿಸಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರು ೭೨ ತಾಸುಗಳಿಗೆ ಮುನ್ನ ಆರೋಗ್ಯ ಸೇತು ಆಪ್ ಡೌನ್‌ಲೋಡ್ ಮಾಡಿಕೊಂಡು ಆರ್‌ಟಿಪಿಸಿಆರ್ ವರದಿಯನ್ನು ಏರ್ ಸುವಿದ ಪೋರ್ಟಲ್‌ನಲ್ಲಿ ಘೋಷಣೆ ಮಾಡಿಕೊಳ್ಳಬೇಕು.
ಈ ಎಲ್ಲ ಷರತ್ತುಗಳನ್ನು ಪೂರೈಸಲು ವಿಮಾನಯಾನ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಥರ್ಮಲ್‌ಸ್ಕ್ಯಾನಿಂಗ್ ಮತ್ತು ಅದರ ಪ್ರತಿಯನ್ನು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು.
ಒಮಿಕ್ರಾನ್ ತಳಿಯಿರುವ ದೇಶಗಳಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿ ಅದರ ಪ್ರತಿಯನ್ನು ಅವರಲ್ಲಿ ನೆಗೆಟೀವ್ ವರದಿ ನೋಡಿಕೊಂಡು ಅಂತವರಿಗೆ ಹೊರ ದೇಶಗಳಿಗೆ ತೆರಳಲು ಅನುಮತಿ ನೀಡಲಾಗುತ್ತದೆ. ಆದರೂ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಿ ೮ನೇ ದಿನ ಜಿನೋಮಿಕ್ ಪರೀಕ್ಷೆ ಮತ್ತು ಐಸೋಲೇಷನ್ ಮಾಡಲಾಗುತ್ತದೆ.
ಒಮಿಕ್ರಾನ್ ತಳಿ ಪತ್ತೆಯಾಗದ ರಾಷ್ಟ್ರಗಳಿಂದ ಬರುವ ಶೇ. ೨ ರಷ್ಟು ಪ್ರಯಾಣಿಕರಿಗೆ ಸಮಗ್ರ ಪರೀಕ್ಷೆ ನಡೆಸಲಾಗುತ್ತದೆ. ಇದರ ಜತೆಗೆ ಪ್ರಯಾಣಿಕರು ೧೪ ದಿನಗಳ ಕಾಲ ಸ್ವಯಂ ನಿಗಾ ವಹಿಸುವಂತೆಯೂ ಸೂಚಿಸಲಾಗಿದೆ.
ಸಾಗರೋತ್ಥರ ರಾಷ್ಟ್ರಗಳಿಂದ ಬರುವ ಪ್ರಯಾಣಿಕರಿಗೂ ಇದೇ ಮಾದರಿಯ ನಿಯಮಾವಳಿಗಳು ಅನ್ವಯವಾಗಲಿದೆ. ೫ ವರ್ಷದ ಕೆಳಗಿನ ಮಕ್ಕಳಿಗೆ ಈ ಎಲ್ಲ ಪರೀಕ್ಷೆಗಳಿಂದ ವಿನಾಯಿತಿ ನೀಡಲಾಗಿದೆ. ಒಂದು ವೇಳೆ ರೋಗ ಲಕ್ಷನಗಳು ಕಂಡು ಬಂದರೆ ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಒಮಿಕ್ರಾನ್ ಹೊಸ ರೂಪಾಂತರಿ ತಳಿ ಸಾಕಷ್ಟು ತಲ್ಲಣ ಸೃಷ್ಟಿಸಿರುವ ಬೆನ್ನಲ್ಲೆ ಮಹಾರಾಷ್ಟ್ರದಲ್ಲಿ ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ೭ ದಿನ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಎರಡು, ನಾಲ್ಕು ಮತ್ತು ಏಳು ದಿನಗಳ ಅವಧಿಯಲ್ಲಿ ಇಂತಹ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಂತಿಮವಾಗಿ ಆ ಪ್ರಯಾಣಿಕರಲ್ಲಿ ವರದಿ ನೆಗೆಟೀವ್ ಬಂದರೆ ೭ ದಿನ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ.
ಇತರ ದೇಶಗಳಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕು. ಅದಾದ ಬಳಿಕ ಮನೆಯಲ್ಲೆ ೧೫ ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಬೇಕು.
ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾದರೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಸ್ಥಳೀಯ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುವ ಮುನ್ನ ೭೨ ತಾಸುಗಳ ಮುನ್ನ ನೆಗೆಟೀವ್ ವರದಿಯನ್ನು ತರುವಂತೆ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.
ಕರ್ನಾಟಕ, ಮಧ್ಯಪ್ರದೇಶ, ಜಮ್ಮು-ಕಾಶ್ಮೀರ, ರಾಜಧಾನಿ ದೆಹಲಿ, ಕೊಲ್ಕತ್ತ, ಚೆನ್ನೈ ಸೇರಿದಂತೆ ದೇಶಾದ್ಯಂತ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.