ಅ.ಆ ಇಲ್ಲದಿದ್ದರೆ ಬದುಕಿನ ಯಾವ ಕೆಲಸವೂ ಆಗದು

ಮೈಸೂರು,ಮಾ.27:- ರಂಗಸಂಸ್ಕೃತಿ ಏಳಿಗೆಯಲ್ಲಿಲ್ಲ, ರಂಗಸಂಸ್ಕೃತಿಯ ಪುನರುಜ್ಜೀವನ ಅಗತ್ಯ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.
ಅವರಿಂದು ಕುವೆಂಪುನಗರದಲ್ಲಿರುವ ಸುರುಚಿ ರಂಗಮನೆಯಲ್ಲಿ ಅಭಿರುಚಿ ಬಳಗ ಹಾಗೂ ಆಸಕ್ತಿ ಪ್ರಕಾಶನ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಬಾನುಲಿ ಹಾಗೂ ರಂಗಭೂಮಿ ನಾಟಕಗಳ ನಟ-ನಿರ್ದೇಶಕ ಆಕಾಶವಾಣಿಯ ಎನ್.ಎಸ್.ವಾಮನ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೊದಲು ನಾವು ಅ.ಆ ದಿಂದ ಪ್ರಾರಂಭ ಮಾಡೋಣ ಅಭಿರುಚಿ ಬಳಗ, ಆಸಕ್ತಿ ಪ್ರಕಾಶನ ಅರ್ಥವತ್ತಾಗಿದೆ. ಇವೆರಡೂ ಇಲ್ಲದಿದ್ದರೆ ಯಾವ ಕೆಲಸವೂ ನಮ್ಮ ಬದುಕಿನಲ್ಲಿ ಆಗಲಾರದು. ವಾಸ್ತವವಾಗಿ ನನಗೆ ರಂಗಭೂಮಿಯ ಪರಿಚಯ ಪರಿಶ್ರಮ ಬಹಳ ಕಡಿಮೆ, ಇಲ್ಲವೆಂದರೂ ಆಶ್ಚರ್ಯವಿಲ್ಲ. ಆದರೆ ಈ ದಿನ ನನ್ನ ಸನ್ಮಿತ್ರರಾದ ಎನ್ ವಿ. ರಮೇಶ್ ಅವರು ಇಳಿವಯಸ್ಸಿನಲ್ಲಿ ರಂಗಭೂಮಿಯ ಒಂದು ಎಳೆಯನ್ನು ಅಂಟಿಸಿದ್ದಾರೆ. ಇದು ನನಗೆ ಸಂತೋಷವನ್ನು ಉಂಟು ಮಾಡಿದೆ. ಇದೊಂದು ಅಪೂರ್ವವಾದಂತಹ ಕಾರ್ಯಕ್ರಮ, ವಿಶ್ವರಂಗಭೂಮಿಯ ದಿನಾಚರಣೆಯ ಅಂಗವಾಗಿ ಬಾನುಲಿ ಹಾಗೂ ರಂಗಭೂಮಿಗಳ ನಟ, ನಿರ್ದೇಶಕ, ಆಕಾಶವಾಣಿಯ, ಎಸ್.ಎನ್.ವಾಮನ ಅವರ ಜನ್ಮಶತಮಾನವನ್ನು ಉದ್ಘಾಟಿಸುವಂತಹ ಭಾಗ್ಯ ನನಗೆ ಒದಗಿ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಮೈಸೂರು ಜಿಲ್ಲಾ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಆಕಾಶವಾಣಿ ನಿವೃತ್ತ ಕಾರ್ಯ ಕ್ರಮಾಧಿಕಾರಿ, ಕೃತಿಯ ಕರ್ತೃ ಎನ್.ವಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.