ಅ್ಯಸಿಡ್ ದಾಳಿಗೆ ತುತ್ತಾದ ಮಹಿಳೆಯರಿಗೆ ನಿವೇಶನ: ಬೊಮ್ಮಯಿ ಘೋಷಣೆ

ಬೆಂಗಳೂರು , ಮೇ.13- ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆಯರಿಗೆ ನಿವೇಶನ ಹಾಗೂ ಸ್ವ ಉದ್ಯೋಗಕ್ಕಾಗಿ 5 ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ಪಿಂಚಣಿಗಾಗಿನ ‘ಹಲೋ ಕಂದಾಯ ಸಚಿವರೇ’ ಸಹಾಯವಾಣಿಗೆ ಚಾಲನೆ‌ ನೀಡಿ ಮಾತನಾಡಿದ ಅವರು, ಆ್ಯಸಿಡ್ ದಾಳಿಗೊಳಗಾದ ಎಲ್ಲರಿಗೆ ಸರ್ಕಾರದಿಂದ ನಿವೇಶನ ನೀಡಲಾಗುವುದು. ಆ ಸಂಬಂಧ ನಾಳೆ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ವಸತಿ ಯೋಜನೆಯಡಿ ಅವರಿಗೆ ಮನೆ ನಿರ್ಮಿಸಿ ಕೊಡಲಾಗುವುದು. ಇದರ ಜೊತೆಗೆ ಸಂತ್ರಸ್ತ ಮಹಿಳೆಯರಿಗೆ 5 ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡಿ, ಸ್ವಯಂ ಉದ್ಯೋಗ ಮಾಡಲು ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ಜನಪರ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ ಎಂದ ಅವರು,ರಾಜಕೀಯದಲ್ಲಿ ಎರಡು ರಾಜಕೀಯ ಇರುತ್ತದೆ. ಜನರ ಪರವಾದ ರಾಜಕೀಯ, ಇನ್ನೊಂದು ಅಧಿಕಾರದ ರಾಜಕಾರಣ. ಅಧಿಕಾರ ಸಿಕ್ಕಾಗ ಜನ‌ಪರ ಕೆಲಸ‌ ಮಾಡಿದ ಆಡಳಿತಗಾರರನ್ನು ಜನ ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.
ಹಳ್ಳಿಗಳಲ್ಲಿ ಜನರು ಸಮಸ್ಯೆ ಜೊತೆ ಜೀವನ ಮಾಡುತ್ತಾರೆ. ನಾವು ಬಿಸಲೇರಿ ನೀರು ಕುಡಿದು, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತನಾಡುತ್ತೇವೆ. ನಾವು ಎಸಿ‌ ರೂಮಿನಲ್ಲಿ ಕುಳಿತು ಬರದ ಬಗ್ಗೆ ಮಾತನಾಡುತ್ತೇವೆ. ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ ಎಂದರು.
ಕಂದಾಯ ಇಲಾಖೆ ಇದೀಗ ದೂರವಾಣಿ ಮೂಲಕವೇ ಪಿಂಚಣಿ ಕೋರಿಕೆ ಸ್ವೀಕರಿಸಿ 72 ಗಂಟೆಯಲ್ಲಿ ಪಿಂಚಣಿ ಮಂಜೂರಾತಿ ಮಾಡುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಹಾಯವಾಣಿ ಸಂಖ್ಯೆ 155245* (ಉಚಿತ) ಕರೆ ಮಾಡಿದರೆ 72 ತಾಸಿನಲ್ಲಿ ಪಿಂಚಣಿ ಮನೆ ಬಾಗಿಲಿಗೆ ಬರಲಿದೆ.