ಅಹ್ಮದಿಯಾ ಮುಸ್ಲೀಮ ಜಮಾತಿನ ಸಂಸ್ಥಾಪನಾ ದಿನಾಚರಣೆ

ಕಲಬುರಗಿ:ಮಾ.24: ಅಲ್ಲಾಹನ ಆಜ್ಞೆಯಂತೆ ಕಳೆದ 23ನೇ ಮಾರ್ಚ 1889ರಲ್ಲಿ ಹಜರತ ಮಿರ್ಜಾ ಗುಲಾಂ ಅಹ್ಮದ ಖಾದಿಯಾನಿ ಅವರು, ತನ್ನ 40ಜನ ಶಿಷ್ಯವರ್ಗಕ್ಕೆ ನಿಷ್ಠೆಯ ದಿಕ್ಷೆಯನ್ನು ನೀಡುವ ಮೂಲಕ ಅಹ್ಮದಿಯಾ ಮುಸ್ಲೀಮ ಜಮಾತಿನ ಬೀಜವನ್ನು ಬಿತ್ತಿದ್ದರು, ಇಂದು ಹೆಮ್ಮರವಾಗಿ ಬೆಳೆದು ಮಾನವೀಯತೆ, ಶಾಂತಿ, ನೆಮ್ಮದಿಯ ನೆರಳು ನೀಡುತ್ತಿದೆ ಎಂದು ಹೈಕೋರ್ಟಿನ ನ್ಯಾಯಾವಾದಿ ಲಿಯಾಖತ ಉಸ್ತಾದ ಫರಿದ್ ಹೇಳಿದರು.
ತಾರಫೈಲ್ 3ನೇ ಕ್ರಾಸ್ ರಹಮತ ನಗರದಲ್ಲಿರುವ ಅಹ್ಮದಿಯಾ ಮುಸ್ಲೀಮ ಸಮಾಜದ ದಾರ್ ಉಲ್ ಝಿಕರ್ (ಪ್ರಾರ್ಥನಾ ಕೇಂದ್ರ) ದಲ್ಲಿ ಮಂಗಳವಾರ ಆಯೋಜಿಸಿದ್ದ 131ನೇ ಅಹ್ಮದಿಯಾ ಮುಸ್ಲೀಮ ಜಮಾತಿನ ಸಂಸ್ಥಾಪನಾ ದಿನಾಚರಣೆ (ವಾಗ್ದತ್ತ ಮಸೀಹ) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವದಲ್ಲಿಂದು ಈ ಜಮಾತಿನ ಅನುಯಾಯಿಗಳು ಕೋಟ್ಯಾಂತರ ಸಂಖ್ಯೆಯಲ್ಲಿದ್ದಾರೆ ಎಂದರು.
ವಿಶ್ವದ ಬಹುತೇಕ ಪ್ರಮುಖ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿರುವ ಭವಿಷ್ಯವಾಣಿ ಎಂತೆ ಅಂತಿಮ ಯುಗದಲ್ಲಿ ಹಿಂದೂಗಳಿಗೆ ಕಲ್ಕಿ, ಕ್ರೈಸ್ತರಿಗೆ ಮಹೀಹ ಮತ್ತು ಮುಸ್ಲೀಮರಿಗೆ ಮಾಊದ್ ಅವತಾರವಾಗಿ ಹಜರತ ಮಿರ್ಜಾ ಗುಲಾಂ ಅಹ್ಮದ ಖಾದಿಯಾನಿ ಅವರು ಸ್ವಯಂ ಈಶ್ವರನಿಂದ ಕಳಿಸಲ್ಪಟ್ಟಿದ್ದಾರೆ ಎಂದರು.
ಪ್ರವಾದಿ ಮೊಹ್ಮದ (ಸಅ) ಅವರು ಹೇಳಿರುವ ಭವಿಷ್ಯವಾಣಿ ಪ್ರಕಾರ 71ಪಂಗಡಗಳಾಗಿ ಹರಿದು ಹಂಚಿಹೋಗಿರುವ ಕ್ರೈಸ್ತ ಸಮೂದಾಯಕ್ಕಿಂತ ತನ್ನ ಮುಸ್ಲೀಮ ಸಮುದಾಯ ಒಂದು ಹೆಚ್ಚು ಅಂದರೆ 72 ಪಂಗಡಗಳಾಗಿ ಹರಿದು ಹಂಚಿ ಹೋಗಲಿದ್ದು, ನೈತ ಭಕ್ತಿಯಿಂದ ದೂರಗೊಂಡು ಗೊಂದಲಗಳಲ್ಲಿ ಮುಳುಗಲಿರುವ ಈ ಸಮಾಜಕ್ಕೆ ಪುನಃ ಇಸ್ಲಾಮೀನ ನೈಜ ಸತ್ಯ ಮಾರ್ಗವನ್ನು ತೋರಿಸಲು ಅಂತಿಮ ಯುಗದಲ್ಲಿ ಹಜರತ ಮಿರ್ಜಾ ಗುಲಾಂ ಅಹ್ಮದ ಖಾದಿಯಾನಿ ಅವರು ಅಲ್ಲಾಹನಿಂದ ಅವತರಿಸಲ್ಪಟ್ಟಿದ್ದಾರೆ ಅವರ ಮೂಲಕ ಸತ್ಯಧರ್ಮದ ಮಾನವೀಯ ಜ್ಯೋತಿ ಬೆಳಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಹ್ಮದಿಯಾ ಮಿಷನರಿ ಮೌಲ್ವಿ ನಸೀರ ಖಾನ್ ಸಾಹೇಬರು ಮಾತನಾಡಿ, ದೇವನಿಂದ ಕಳುಹಿಸಲ್ಪಟ್ಟಿರುವ ಎಲ್ಲ ಅವತಾರ ಪುರುಷರನ್ನು, ಪ್ರವಾದಿಗಳನ್ನು ಮತ್ತು ಸಂತರನ್ನು ಜನಸಾಮಾನ್ಯರು ಸುಲಭವಾಗಿ ನಂಬಲಿಲ್ಲ, ಇವರನ್ನು ಹುಚ್ಚ, ಸುಳ್ಳುಗಾರ ಮತ್ತು ಧರ್ಮದ್ರೋಹಿ ಎಂಬ ಹಣೆಪಟ್ಟಿಯನ್ನು ಕಟ್ಟದೇ ಬಿಟ್ಟಿಲ್ಲ ಎಂದರು.
ಪವಿತ್ರ ಕುರ್‍ಆನಿನಲ್ಲಿ ಸ್ವಯಂ ಅಲ್ಲಾಹನೇ ಹೇಳಿದ್ದಾನೆ ಸುಳ್ಳು ಪ್ರವಾದಿ ಮತ್ತು ಅವತಾರ ಪುರುಷರನ್ನು ಅವರ ನರನಾಡಿಯನ್ನು ಹಿಸುಕಿ ನಾಶಮಾಡುವುದಾಗಿ ಅಲ್ಲದೇ ಸುಳ್ಳು ಪ್ರವಾದಿಗಳ ಅನುಯಾಯಿಗಳು ವಿಶ್ವದಲ್ಲಿ ಹುಡುಕಿದರೂ ಸಿಗುವುದಿಲ್ಲ. ಅಹ್ಮದಿಯಾ ಮುಸ್ಲೀಮ ಜಮಾತಿನಲ್ಲಿ (ಖಿಲಾಫತ್) ಇಮಾಮ್‍ನ ವ್ಯವಸ್ಥೆ ಇದೆ. ವಿಶ್ವದಲ್ಲಿ ಒಬ್ಬನೇ ನೇತಾರ ಇರುವ ಜಮಾತ್ ಇದೋಂದೆ ಎಂದರು.
ಜಮಾತಿನ ಮಾಜಿ ಅಧ್ಯಕ್ಷ ಮೊಹ್ಮದ ವಸೀಮ ಅಹ್ಮದ ನೂರ ಮಾತನಾಡಿ, ಮೊಹ್ಮದ ಉಮರಸಾಬ ಉಸ್ತಾದ, ಕಾರ್ಯದರ್ಶಿ ಅಷಮತ್ ಉಲ್ಲಾ ಹೌದೊಡಿ, ಮೊಹ್ಮದ ಅಬ್ದುಲ್ಲಾ ಉಸ್ತಾದ, ಮಾಜಿ ಜಿಲ್ಲಾಧ್ಯಕ್ಷ ಅಮೀರ ಮೊಹ್ಮದ ಖುರೇಷಿ ಅಬ್ದುಲ್ಲಾ ಸೇರಿದಂತೆ ಹಲವರಿದ್ದರು. ಸಮೊಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಮಾರೋಪ ಗೊಂಡಿತು. ಬೆಳಗಿನ ಜಾವ ವಿಶೇಷ ತಾಜುದ್ದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ, ಬಡ ರೋಗಿಗಳಿಗೆ ಹಣ್ಣುಹಂಪಲ ವಿತರಣೆ ನಡೆಯಿತು.