ಅಹೋರಾತ್ರಿ ಆಮರಣ ಉಪವಾಸ ಸತ್ಯಾಗ್ರಹ ಕ ರವೇ ಬೆಂಬಲ

ವಿಜಯಪುರ, ಡಿ.31-ಶ್ರೀ ಮುರಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ವಿಜಯಪುರ ಇವರು ಗ್ರಾಹಕರ ಹಣ ದುರುಪಯೋಗ ಪಡಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ಗ್ರಾಹಕರಿಗೆ ಹಣ ಹಿಂದುರುಗಿಸಲು ಆಗ್ರಹಿಸಿ ಜಿಲ್ಲಾ ಸಹಕಾರಿ ನಿಬಂಧಕರ ಕಛೇರಿ ಆವರಣದೊಳಗೆ ಮೂವತ್ತೈದು ದಿನಗಳಿಂದ ಪ್ರತಿಭಟನೆ ಧರಣಿ ನಡೆಸಿ, ಸದ್ಯ ಅಹೋರಾತ್ರಿ ಆಮರಣ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಪ್ರತಿಭಟನಾಕಾರರಿಗೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯು ನೈತಿಕ ಬೆಂಬಲ ನೀಡಿ ಬ್ಯಾಂಕ್ ಮತ್ತು ಸಹಕಾರಿ ಇಲಾಖೆಯ ವರ್ತನೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ. ಸಿ. ಮುಲ್ಲಾ ಮಾತನಾಡಿ, ನೀವು ತಿಂಗಳಿನಿಂದ ನಡೆಸುತ್ತಿರುವ ಪ್ರತಿಭಟನೆ, ನ್ಯಾಯಯುತವಾಗಿದ್ದು, ಅನೇಕ ನಿವೃತ್ತ ನೌಕರರು, ವ್ಯಾಪಾರಸ್ಥರು, ಮಹಿಳೆಯರು ತಮ್ಮ ಮನೆಯವರಿಗೆ ಮಾಹಿತಿ ಕೊಡದೆ ಹಣ ದ್ವಿಗುಣ ಜೊತೆಗೆ ರಕ್ಷಣೆಯಲ್ಲಿರುತ್ತದೆ ಎಂದು ಸದರಿ ಬ್ಯಾಂಕಿಗೆ ಡಿಪಾಜಿಟ್ ಮಾಡಿದರೆ ಹೇಗೆ ಇಂತಹ ಅಮಾಯಕರನ್ನು ವಂಚಿಸುವ ಕೆಲಸ ನೋಂದಾಯಿತ ಸಹಕಾರಿ ಸಂಘ ಸಂಸ್ಥೆಗಳೇ ಮಾಡುತ್ತಿವೆ. ಸಹಕಾರಿ ಕಾಯ್ದೆ ಮತ್ತು ನಿಯಮಗಳು ಬ್ಯಾಂಕ್ ಸಹಕಾರಿ ಸಂಘಗಳ ಪರವಾಗಿದ್ದು ಬ್ಯಾಂಕ್‍ಗಳೇ ಗ್ರಾಹಕರಿಗೆ ತೊಂದರೆ ಮಾಡಿದಾಗ ಗ್ರಾಹಕರ ಪರವಾದ ಯಾವುದೇ ಕಾನೂನಿಲ್ಲ ಗ್ರಾಹಕರ ಅನುಕೂಲ ತಕ್ಕಂತೆ ಕಾಯ್ದೆ ಮತ್ತು ನಿಯಮಗಳು ಬದಲಾಗಬೇಕೆಂದು ಒತ್ತಾಯಿಸಿದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಹಾಗೂ ಸಂಚಾಲಕ ಸಾಯಿಬಣ್ಣ ಮಡಿವಾಳರ ಮಾತನಾಡಿ, ಮಾಜಿ ಸಚಿವರು, ಹಾಲಿ ಶಾಸಕರು ಸಹಕಾರಿ ಧುರೀಣರಾಗಿರುವ ಮತ್ತು ಬೃಹತ್ ಉದ್ಯಮಿಯಾಗಿರುವ ನಿರಾಣಿಯವರ ಮೇಲೆ ಭರವಸೆ ಇಟ್ಟು ಅವರ ಹೆಸರಿನಿಂದ ನೋಂದಣಿಯಾಗಿರುವ ಸಹಕಾರಿ ಸಂಸ್ಥೆಯಲ್ಲಿ ಕೋಟಿ ಕೋಟಿಗಟ್ಟಲೆ ಹಣ ತೊಡಗಿಸಿದರು. ಆ ಹಣ ಗ್ರಾಹಕರಿಗೆ ಸಿಗುತ್ತಿಲ್ಲ. ಸದ್ಯ ಈ ಕುರಿತು ನಿರಾಣಿಯವರು ಸಹ ಸ್ಪಷ್ಟನೆ ನೀಡುತ್ತಿಲ್ಲ. ಅಲ್ಲದೇ ಈ ಪ್ರತಿಭಟನಾ ಕಾರರಿಗೆ ಸರ್ಕಾರ ಸಂಬಂಧಿಸಿದ ಅಧಿಕಾರಿಗಳು ಮತ್ತು ಬ್ಯಾಂಕ್‍ನವರು ಸಹ ಪ್ರತಿಭಟನಾ ಕಾರರ ಪ್ರತಿಭಟನೆಗೆ ಜಗ್ಗುತ್ತಿಲ್ಲ. ಇದರಿಂದ ಅಮಾಯಕ ಗ್ರಾಹಕರು ಇಂತಹ ಸಹಕಾರ ಬ್ಯಾಂಕಿನ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಕೂಡಲೇ ಸಂಬಂಧಿಸಿದವರು ಗ್ರಾಹಕರಿಗೆ ಆದ ಅನ್ಯಾಯ ಸರಿಪಡಿಸಬೇಕು. ಇಲ್ಲದ ಪಕ್ಷ ಕರ್ನಾಟಕ ರಕ್ಷಣಾ ವೇದಿಕೆ ನೋಂದ ಗ್ರಾಹಕರ ಜೊತೆಯಲ್ಲಿ ಅಲ್ಲ ಮುಂದೆ ನಿಂತು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಕಾರ್ಯದರ್ಶಿ ದಸ್ತಗೀರ ಸಾಲೋಟಗಿ, ತಾಲೂಕಾಧ್ಯಕ್ಷ ವಿನೋದ ದಳವಾಯಿ, ರಾಜೇಂದ್ರಸಿಂಗ್ ಹಜೇರಿ, ಆಸೀಪ ಪೀರವಾಲೆ, ರಜಾಕ ಕಾಖಂಡಕಿ, ತಾಜುದ್ದೀನ ಖಲೀಫಾ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.