ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ

(ಸಂಜೆವಾಣಿ ವಾರ್ತೆ)
ನವಲಗುಂದ,ಡಿ8 : ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ತ್ಯಾಗದಿಂದ ಸಿದ್ಧಿ ಎಂಬ ಮಹಾನ್ ಸಂದೇಶವನ್ನು ಜನತೆಗೆ ತಿಳಿಸುವುದು ಆದ್ಯ ಕರ್ತವ್ಯವಾಗಿದೆ’ ಎಂದು ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ನುಡಿದರು.

ಅವರು ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ಏರ್ಪಡಿಸಿದ ಭಗವಾನ್ ಶ್ರೀ 1008 ಆದಿನಾಥ ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಸವಾಲ್ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ‘ಸಕಲ ಜೀವರಾಶಿಗಳಿಗೂ ಒಳ್ಳೆಯದಾಗಬೇಕು. ಲೋಕಲ್ಯಾಣಕ್ಕಾಗಿ ಪ್ರಾರ್ಥನೆ ಪೂಜೆ ಮಾಡುವುದು ನಮ್ಮ ಕರ್ತವ್ಯವಾಗಬೇಕು. ಇದು ಧರ್ಮದ ಒಂದು ಭಾಗವಾಗಿದ್ದು, ಎಲ್ಲರೂ ಅಳವಡಿಸಿಕೊಳ್ಳಬೇಕು. ಸಮಸ್ತ ಶ್ರಾವಕ, ಶ್ರಾವಕಿಯರು ಧರ್ಮ ಪ್ರಭಾವನೆಗಾಗಿ ನಿರಂತರ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಧಾರ್ಮಿಕತೆ, ಸಂಸ್ಕೃತಿಯ ಪ್ರತಿರೂಪವಾಗಿರುವ ಪುರಾತನ ಮಂದಿರ ಜೀಣೋದ್ಧಾರ ಮಾಡಿರುವುದು ಸಂತಸದ ವಿಷಯ` ಎಂದು ಹೇಳುವ ಮೂಲಕ ಆಶೀರ್ವಚನ ನೀಡಿದರು.

ಇದಕ್ಕೂ ಮೊದಲು ಶಾಸಕ ಎನ್.ಎಚ್.ಕೋನರಡ್ಡಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ತತ್ವಗಳ ತಳಹದಿ ಮೇಲೆ ಬೆಳದಿರುವ ಈ ನಾಡು, ಸಂಸ್ಕೃತಿಯ ಸಂಕೇತವಾಗಿದೆ. ಇಂದಿನ ಯುವಜನರು ಹಾಗೂ ಮಕ್ಕಳು ಧಾರ್ಮಿಕ ಸಂಸ್ಕಾರ ಪಡೆಯುವುದು ಅವಶ್ಯ ಎಂದರು.

ನವಲಗುಂದ ತಾಲ್ಲೂಕು ಜೈನ ಸಮಾಜದ ಅಧ್ಯಕ್ಷ ವಿದ್ಯಾಧರ.ಪಿ.ಪಾಟೀಲ್ ಮಾತನಾಡಿ, `ನೂತನವಾಗಿ ಭಗವಾನ ಶ್ರೀ 1008 ಪಾರ್ಶ್ವನಾಥ ಮೂರ್ತಿಯನ್ನು ಪ್ರತಿಷ್ಠಾಪಿಸಲು ಇದೀಗ ತೀರ್ಥಂಕರರ ಜಿನಬಿಂಬದ ಪಂಚಕಲ್ಯಾಣ ಮಹಾಮಹೋತ್ಸವ ನಡೆಯುತ್ತಿರುವುದು ಸಂತೋಷದ ಸಂಗತಿ’ ಎಂದು ಹೇಳಿದರು.

ಜೈನ ಮಂದಿರದ ಅಧ್ಯಕ್ಷ ಅಜೀತ ಮಾರ್ಗಿನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಬಾಹುಬಲಿ ಬಸ್ತಿ, ಭರಮಗೌಡ್ರ ಹಿರೇಗೌಡ್ರ, ಸೋಮನಗೌಡ ಹಿರೇಗೌಡ್ರ ಹಾಗೂ ಪ್ರತಿಷ್ಠಾಚಾರ್ಯ ಶ್ರೀಮಂಧರ ಉಪಾಧ್ಯೆ, ಸ್ಥಾನಿಕ ಪಂಡಿತ ಚಳ್ಳಪ್ಪ ಬಸ್ತಿ, ಕಾರ್ಯದರ್ಶಿ ಇಂದ್ರಗೌಡ ಜಕ್ಕನಗೌಡ್ರ ಸೇರಿದಂತೆ ಮಂದಿರದ ಟ್ರಸ್ಟಿಗಳು ಹಾಗೂ ನವಲಗುಂದ, ಅಣ್ಣಿಗೇರಿ ಮತ್ತು ನರಗುಂದ ತಾಲ್ಲೂಕುಗಳ ಸಮಸ್ತ ಶ್ರಾವಕ-ಶ್ರಾವಕಿಯರು ಗ್ರಾಮದ ಗುರುಹಿರಿಯರು ಪಾಲ್ಗೊಂಡಿದ್ದರು.