ಅಹಿಂದ ವರ್ಗಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡಲಿ

ಹಗರಿಬೊಮ್ಮನಹಳ್ಳಿ, ಜೂ 11 : ತಾಲೂಕಿನ ಅಹಿಂದ ಐಕ್ಯತಾ ವೇದಿಕೆ ವತಿಯಿಂದ ಬಡ ಕುರಿಗಾಯಿಗಳು, ಪೂಜಾರಿಗಳು, ಚಮ್ಮಾರರು, ಕಟ್ಟಡ ಕಾರ್ಮಿಕರು, ಮೆಕಾನಿಕ್ ವರ್ಗಗಳ ಬಡ ಕುಟುಂಬದವರಿಗೆ ಕೊರೋನಾ ಸೋಂಕಿನಿಂದ ತತ್ತರಿಸಿರುವಾಗ ಸರ್ಕಾರದ ಲಾಕ್‍ಡೌನ್ ನಿಮಿತ್ತ ಫುಡ್ ಕಿಟ್ ನೀಡಲಾಯಿತು.
ಅಹಿಂದ ಐಕ್ಯತಾ ವೇದಿಕೆ ತಾಲೂಕು ಸಂಚಾಲಕ ಬುಡ್ಡಿ ಬಸವರಾಜ್ ಮಾತನಾಡಿ ಅಲ್ಪ ಸಂಖ್ಯಾತರು, ದಲಿತರು, ಹಿಂದುಳಿದವರು, ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಇವರಿಗೆ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸದೇ ಇರುವುದು ದುರಂತವಾಗಿದೆ. ಕೊರೋನಾ ಸೋಂಕಿನ ಸಂದರ್ಭದಲ್ಲಿ ಈ ವರ್ಗದ ಜನರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದಿಲ್ಲ. ಆದರೆ ಕೆಲವು ದಿನಗಳಿಗೆ ಆಗುವಷ್ಟು ದವಸ, ಧಾನ್ಯಗಳ ಕಿಟ್ ಸರ್ಕಾರ ವಿತರಣೆ ಮಾಡಿದರೆ ಅಹಿಂದ ವರ್ಗಕ್ಕೆ ನೆರವು ನೀಡಿದಂತಾಗುತ್ತದೆ. ಅಲ್ಲದೆ ಇಂದು ಸಾರ್ವಜನಿಕರು ಖರೀದಿ ಮಾಡುವ ಪ್ರತಿಯೊಂದು ದವಸ ಧಾನ್ಯಗಳ ಬೆಲೆ ಗಗನಕ್ಕೇರಿದೆ. ಅಹಿಂದ ವರ್ಗ ಬೆಳೆಯುವ ಬೆಳೆಗೆ ಬೆಲೆಯಿಲ್ಲದಂತಾಗಿದೆ. ಸರ್ಕಾರ ಅಹಿಂದ ವರ್ಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ ಎಂದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹಾಲಸಿದ್ದಪ್ಪ ಪೂಜಾರಿ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪರಮೇಶ್ವರಪ್ಪ ಫುಡ್ ಕಿಟ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಾಲೂಕಿನಲ್ಲಿ ಬಹುತೇಕ ನಿರ್ಗತಿಕ ಕುಟುಂಬಗಳು ಇವೆ. ಈ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳ ಅವಶ್ಯಕತೆ ಇದೆ. ಲಾಕ್‍ಡೌನ್ ಸಂದರ್ಭದಲ್ಲಿ ಯಾರು ದೃತಿಗೆಡುವ ಅವಶ್ಯಕತೆ ಇಲ್ಲ. ಸಂಘ ಸಂಸ್ಥೆಗಳ ನೆರವು ಪಡೆದುಕೊಂಡು ಕೊರೋನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ನೆಮ್ಮದಿಯ ಜೀವನ ಸಾಗಿಸಿ ಎಂದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ದೊಡ್ಡಬಸಪ್ಪ, ಕುರುಬ ಸಮಾಜದ ಮುಖಂಡ ಮುಟುಗನಹಳ್ಳಿ ಕೊಟ್ರೇಶ್, ಅಲ್ಪಸಂಖ್ಯಾತರ ಮುಖಂಡ ಬಾಬುವಲಿ, ಮಹಿಳಾ ಮುಖಂಡರಾದ ಹುಲಿಗೆಮ್ಮ ಮಾತನಾಡಿದರು.
ಕುರುಬರ ಸಂಘದ ರಾಜ್ಯ ನಿರ್ದೇಶಕ ಮರಿರಾಮಪ್ಪ, ಕೋಡಿಹಳ್ಳಿ ಮಂಜುನಾಥ, ಚಿಂತ್ರಪಳ್ಳಿ ನಾಗರಾಜ, ಕೆ.ಹನುಮಂತ, ಜೆ.ಸಿ.ಬಿ.ಮಾಬು, ಬಿ.ನಾಗರಾಜ, ದೊಡ್ಡಬಸಪ್ಪ, ಹುಲುಗಪ್ಪ, ಹುಲ್ಮನಿ ಮಂಜುನಾಥ, ಎಸ್.ಎನ್.ಭಜಂತ್ರಿ, ನಾಯಕರ ಬಸವರಾಜ, ಹೊಸಮನಿ ದೊಡ್ಡಬಸಪ್ಪ, ಪರಶುರಾಮ ಇತರರು ಇದ್ದರು.