ಅಹವಾಲು ಸ್ವೀಕಾರ, ವಿಚಾರಣೆ ಕಾರ್ಯಕ್ರಮಕಾರ್ಯಾಂಗದ ಮಹತ್ವದ ಉದ್ದೇಶ ಸಾಕಾರಕ್ಕೆ ಶ್ರಮಿಸಿ: ನ್ಯಾ.ಕೆ.ಎನ್.ಫಣೀಂದ್ರ


ಸಂಜೆವಾಣಿ ವಾರ್ತೆ
ಕೊಪ್ಪಳ, ಅ- 08: ಅಕ್ಟೋಬರ್ 7ರಿಂದ ಅಕ್ಟೋಬರ್ 9ರವರೆಗೆ ಮೂರು ದಿನಗಳ ಕಾಲ ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿರುವ ಸಾರ್ವಜನಿಕ ಅಹವಾಲು, ಕುಂದು ಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮಕ್ಕೆ ಕರ್ನಾಟಕ ಲೋಕಾಯುಕ್ತದ ಗೌರವಾನ್ವಿತ ಉಪಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂಧ್ರ ಅವರು ಚಾಲನೆ ನೀಡಿದರು.
ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರಿಂದ ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲ್ ನಲ್ಲಿ ಅಕ್ಟೋಬರ್ 7ರಂದು ನಡೆದ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ರಾಜ್ಯದ 9 ಜಿಲ್ಲೆಗಳಲ್ಲಿ ಈಗಾಗಲೇ ಯಶಸ್ವಿಯಾಗಿ ನಡೆಸಲಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವು ಫಲಕೊಟ್ಟಿದ್ದರಿಂದ ರಾಜ್ಯದ್ಯಂತ ಈ ಕಾರ್ಯಕ್ರಮವನ್ನು ಮುಂದುವರೆಸಲಾಗುತ್ತಿದೆ. ಜಿಲ್ಲೆಯೊಂದರಲ್ಲಿ ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳದಲ್ಲಿಯೇ 88 ಪ್ರಕರಣಗಳನ್ನು ವಿಲೇ ಮಾಡಿದ ಶ್ರೇಯಸ್ಸು ಲೋಕಾಯುಕ್ತ ಸಂಸ್ಥೆಗೆ ಸಲ್ಲುತ್ತದೆ ಎಂದು ತಿಳಿಸಿದರು.
‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎನ್ನುವ ಆಶಯದ ತತ್ವವನ್ನು ಸಂವಿಧಾನವು ಒಳಗೊಂಡಿದೆ. ಉತ್ತಮ ಜೀವನ ನಡೆಸುವುದು ಪ್ರತಿಯೊಬ್ಬರ ಹಕ್ಕಾಗಿದೆ. ಸಂವಿಧಾನದ ಆಶಯವನ್ನು ಸಾಕಾರಗೊಳಿಸುವುದು ಮತ್ತು ಹಕ್ಕುಗಳು ಪ್ರತಿಯೊಬ್ಬರಿಗೂ ಸಂವಿಧಾನಬದ್ಧವಾಗಿ ದೊರೆಯುವ ಕಾರ್ಯವಾಗಬೇಕಿದೆ ಎಂದರು. ಸರ್ಕಾರಗಳು ಹೊರಡಿಸುವ ನಿರ್ದೇಶನಗಳು ಸರಿಯಾಗಿ ಕಾರ್ಯಾನುಷ್ಠಾನವಾಗುತ್ತಿದೆಯೋ ಅಥವಾ ಇಲ್ಲವೋ ಎಂಬುದನ್ನು ವಾಚ್ ಡಾಗ್ ರೀತಿಯಲ್ಲಿ ಲೋಕಾಯುಕ್ತ ಸಂಸ್ಥೆಯು ಗಮನಿಸುತ್ತದೆ ಎಂದು ಅವರು ತಿಳಿಸಿದರು.
ಜನಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಇದನ್ನು ಅಧಿಕಾರಿಗಳು ಅರ್ಥೈಸಿಕೊಳ್ಳಬೇಕು. ಸರ್ಕಾರದ ಕೆಲಸವನ್ನು ದೇವರ ಕೆಲಸ ಎಂದು ಭಾವಿಸಬೇಕು. ಕಾನೂನು ಸಂರಕ್ಷಣೆ ಮಾಡುವ ಮೂಲಕ ಜನರಿಗೆ ನ್ಯಾಯ ಒದಗಿಸಿ ಕಾರ್ಯಾಂಗದ ಮಹತ್ವದ ಉದ್ದೇಶವನ್ನು ಸಾಕಾರಗೊಳಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಕಾರ್ಯಾಂಗವು ಸರಿಯಾಗಿ ಕೆಲಸ ಮಾಡದಿದ್ದಾಗ ಮಾತ್ರ ಅರ್ಜಿದಾರರು ಮೇಲಧಿಕಾರಿಗಳು, ಪೊಲೀಸ್ ಮೊರೆ ಹೋಗುತ್ತಾರೆ ಎಂಬುದನ್ನು ಅಧಿಕಾರಿಗಳು ಅರಿಯಬೇಕು ಎಂದರು.
ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಮಾಡಬೇಕಾದ ಕೆಲಸವನ್ನು ಸಮಯೋಚಿತವಾಗಿ ಸರಿಯಾಗಿ ಮಾಡಬೇಕು. ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡದೇ ಇರುವುದು, ನಿಯಮಾವಳಿ ಪಾಲನೆ ಮಾಡದೇ ಕೆಲಸ ಮಾಡುವುದು ತಪ್ಪು ಎಂಬುದನ್ನು ಅಧಿಕಾರಿಗಳು ಅರಿಯಬೇಕು. ಯಾವುದಕ್ಕೆ ಕ್ಷಿಪ್ರಗತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಅರಿವು ಇರಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ, ಕರ್ನಾಟಕ ಲೋಕಾಯುಕ್ತ ಬೆಂಗಳೂರಿನ ವಿಚಾರಣೆಯ ಉಪ ನಿಬಂಧಕರಾದ ಎಂ.ವಿ.ಚನ್ನಕೇಶವ ರೆಡ್ಡಿ, ಹೆಚ್ಚುವರಿ ನಿಬಂಧಕರಾದ ಸುದೇಶ ರಾಜಾರಾಂ ಪರದೇಶಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿಗಳಾದ ಕಿರಣ್ ಪ್ರಹ್ಲಾದ್‌ರಾವ್ ಮುತಾಲಿಕ್ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಕರ್ನಾಟಕ ಲೋಕಾಯುಕ್ತ ರಾಯಚೂರಿನ ಪೊಲೀಸ್ ಅಧೀಕ್ಷಕರಾದ ಡಾ.ರಾಮ್ ಲಕ್ಷö್ಮಣ ಅರಸಿದ್ದಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ಲೋಕಾಯುಕ್ತ ಕಚೇರಿಯ ಉಪಾಧೀಕ್ಷಕರಾದ ಸಲಿಂ ಪಾಶಾ, ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ ಶರಣಬಸಪ್ಪ ಸುಬೇಧಾರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕೊಪ್ಪಳ ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್‌ಗಳಾದ ಗಿರೀಶ್ ರೋಡಕರ, ಚಂದ್ರಪ್ಪ, ರಾಜೇಶ ಹಾಗೂ ವಿವಿಧ ಇಲಾಖೆಗಳ ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಇನ್ನೀತರರು ಉಪಸ್ಥಿತರಿದ್ದರು.
ಯುನಿಸೆಪ್ ಮಕ್ಕಳ ರಕ್ಷಣಾ ಯೋಜನೆ ಯುನಿಸೆಪ್‌ನ ಕಾರ್ಯಕ್ರಮದ ವ್ಯವಸ್ಥಾಪಕರಾದ ಹರೀಶ್ ಜೋಗಿ ಸ್ವಾಗತಿಸಿದರು. ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ನಿರೂಪಿಸಿದರು. ವೇದಿಕೆಯ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಪ್ರಕ್ರಿಯೆ ನಡೆಯಿತು,