ಅಹವಾಲುಗಳ ಮಹಾಪೂರ

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯರವರು ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಪರಿಶೀಲನೆ ನಡೆಸುತ್ತಿರುವುದು.

ಬೆಂಗಳೂರು, ನ. ೨೭- ಜನರ ಬಳಿಗೆ ಆಡಳಿತವನ್ನು ಕೊಂಡೊಯ್ದು ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಜನತಾದರ್ಶನದ ಮೂಲಕ ಮಾಡಿದರು.ಜನಸ್ಪಂದನ ಹೆಸರಿನಲ್ಲಿ ಜನರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವ ಆಶಯದೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾದರ್ಶನ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಒದಗಿಸುವ ಕಾರ್ಯ ನಡೆಸಿದರು.
ಎರಡನೇ ಬಾರಿ ಮುಖ್ಯಮಂತ್ರಿಯಾದ ನಂತರ ಸಿದ್ಧರಾಮಯ್ಯ ಅವರು ಇಂದು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಜನತಾದರ್ಶನ ನಡೆಸಿ ಜನರ ಅಹವಾಲುಗಳನ್ನು ಆಲಿಸಿ, ಬಹುತೇಕ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಟ್ಟರು. ಅಹವಾಲುಗಳನ್ನು ಹೊತ್ತು ಬಂದ ಜನರ ನೋವುಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಇದಕ್ಕೆಲ್ಲಾ ಪರಿಹಾರ ಒದಗಿಸುವಂತೆ ತಾಕೀತು ಮಾಡಿದ್ದು, ಅಹವಾಲು ತಂದಿದ್ದ ಜನರ ಮೊಗದಲ್ಲಿ ಮಂದಹಾಸ ಕಾಣಿಸಿತು.
ಜನ ಸಾಗರ
ಪಿಂಚಣಿ ಸಮಸ್ಯೆ, ವೃದ್ಧಾಪ್ಯವೇತನ, ಪಡಿತರ ಚೀಟಿ ಸಮಸ್ಯೆ, ಬೀದಿಬದಿ ವ್ಯಾಪಾರಿಗಳಿಗೆ ಕಿರುಕುಳ, ಕಂದಾಯ ಇಲಾಖೆಯಲ್ಲಿ ಪೋಡಿ, ಖಾತೆ, ಭೂಪರಿವರ್ತನೆ ಸಮಸ್ಯೆ, ಬಿಬಿಎಂಪಿಯಲ್ಲಿ ಖಾತೆ ಪರಿವರ್ತನೆ ಸಮಸ್ಯೆ, ಖಾತೆ ಬದಲಾವಣೆ ಸಮಸ್ಯೆ, ಕಂದಾಯ ಕಟ್ಟಿದ್ದರೂ ದಂಡ ಹಾಕುತ್ತಿರುವ ಬಿಬಿಎಂಪಿ ಅಧಿಕಾರಿಗಳ ದರ್ಪದ ಧೋರಣೆ ಹೀಗೆ ತರಹೇವಾರಿ ದೂರುಗಳ ಸುರಿಮಳೆಯೇ ಮುಖ್ಯಮಂತ್ರಿಗಳ ಮುಂದೆ ಆಗಿದ್ದು, ಪ್ರತಿಯೊಬ್ಬರ ದೂರನ್ನು ಆಲಿಸಿದ ಮುಖ್ಯಮಂತ್ರಿಗಳು, ಎಲ್ಲ ದೂರುಗಳಿಗೂ ಪರಿಹಾರ ಒದಗಿಸುವ ಜತೆಗೆ ಕೆಲ ದೂರುಗಳನ್ನು ಪರಿಹರಿಸಿ ತಮಗೆ ವರದಿ ನೀಡುವಂತೆಯೂ ಅಧಿಕಾರಿಗಳಿಗೆ ತಾಕೀತು ಮಾಡಿದರು.ನಾಡಿನ ದೊರೆಯ ಅಹವಾಲು ಆಲಿಸುವ ಕಾರ್ಯಕ್ರಮಕ್ಕೆ ನಾಡಿನ ಎಲ್ಲೆಡೆಯಿಂದ ಜನ ಬಂದಿದ್ದು, ಗೃಹ ಕಚೇರಿ ಕೃಷ್ಣಾ ಎದುರಿಗಿನ ರಸ್ತೆ. ಜನರಿಂದ ತುಂಬಿ ಹೋಗಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹ ತಾಳ್ಮೆ, ಸಮಾಧಾನದಿಂದ ಜನರ ಸಮಸ್ಯೆಗಳನ್ನು ಆಲಿಸಿ, ಅಧಿಕಾರಿಗಳಿಗೆ ಇಷ್ಟು ದಿನಗಳಾದರೂ ಸಮಸ್ಯೆಗಳಿಗೆ ಪರಿಹಾರ ದೊರಕಿಸಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಸಮರ್ಪಕ ವ್ಯವಸ್ಥೆ
ಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಯಾವುದೇ ತೊಂದರೆಯಾಗದಂತೆ ಸಮರ್ಪಕ ವ್ಯವಸ್ಥೆ ಮಾಡಲಾಗಿದ್ದು, ಪ್ರತಿಯೊಬ್ಬರು ಸರದಿ ಸಾಲಿನಲ್ಲಿ ಬಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ವ್ಯವಸ್ಥೆ ಮಾಡಲಾಗಿತ್ತು .
ಹಿರಿಯ ನಾಗರಿಕರು ಮತ್ತು ವಿಶೇಷ ಚೇತರನಗೆ ಪ್ರತ್ಯೇಕ ಸಾಲುಗಳನ್ನು ಮಾಡಿದ್ದು, ಇವರುಗಳಿಗೆ ಬೆಳಗ್ಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಾಗೆಯೇ ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.ಜನರ ಅಹವಾವುಗಳನ್ನು ಸ್ವೀಕರಿಸಲು ಕೃಷ್ಣಾದಲ್ಲಿ ಒಟ್ಟು ೨೦ ಕೌಂಟರ್‌ಗಳನ್ನು ಸ್ಥಾಪಿಸಲಾಗಿದ್ದು, ಸರ್ಕಾರದ ಎಲ್ಲ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ಎಲ್ಲ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರದಲ್ಲಿ ಹಾಜರಿರುವಂತೆ ಸೂಚಿಸಲಾಗಿದ್ದು, ಜನತಾದರ್ಶನ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳಿಗೆ ಪರಿಹಾರ ಒದಗಿಸಲು ೩೫೦ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಸ್ಥಳದಲ್ಲೇ ಪರಿಹಾರ ದೊರಕದ ಅರ್ಜಿಗಳ ಸ್ಥಿತಿಗತಿಯನ್ನು ದೂರುದಾರರಿಗೆ ತಿಳಿಸಲು ವ್ಯವಸ್ಥೆ ಮಾಡಲಾಗಿದ್ದು, ನಾಗರಿಕರ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿಗಳ ತಂತ್ರಾಂಶದಲ್ಲಿ ದಾಖಲಿಸಿ ಆ ದೂರುಗಳ ಸ್ಥಿತಿಗತಿ ತಿಳಿಸುವ ವ್ಯವಸ್ಥೆ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಹಿಂದೆಯೇ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಪ್ರತಿ ಜಿಲ್ಲೆಯಲ್ಲೂ ಪ್ರತಿ ತಿಂಗಳು ಜನತಾದರ್ಶನ ನಡೆಸಿ ಜನ ಸಣ್ಣಪುಟ್ಟ ಅಹವಾಲುಗಳನ್ನು ಹೊತ್ತು ತಮ್ಮನ್ನು ಭೇಟಿ ಮಾಡಲು ಬೆಂಗಳೂರಿಗೆ ಬರುವುದನ್ನು ತಪ್ಪಿಸುವಂತೆ ಸೂಚನೆ ನೀಡಿದ್ದರು. ಆದರೆ ಇಂದು ವಿವಿಧೆಡೆಯಿಂದ ಜನ ಬೆಂಗಳೂರಿಗೆ ಆಗಮಿಸಿದ್ದ ಜಿಲ್ಲಾ ಜನತಾದರ್ಶನಗಳಲ್ಲಿ ತಮ್ಮ ದೂರುಗಳಿಗೆ ಮುಕ್ತಿ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿಗಳಿಗೆ ದೂರಿದ ಪ್ರಸಂಗವೂ ನಡೆಯಿತು.

ಪ್ರತಿಭಟನೆ ಬಿಸಿ
ಮುಖ್ಯಮಂತ್ರಿಗಳ ಜನತಾದರ್ಶನಕ್ಕೆ ಪ್ರತಿಭಟನೆಯ ಬಿಸಿ ತಟ್ಟಿದೆ.
ಪಿಎಸ್‌ಐ ಹುದ್ದೆಯ ನೇಮಕಾತಿ ಪರೀಕ್ಷೆಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಪರೀಕ್ಷಾರ್ಥಿಗಳು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬೆಳಗ್ಗೆ ಪ್ರತಿಭಟನೆ, ಧರಣಿ ನಡೆಸಿದ್ದು, ಪ್ರತಿಭಟಾಕಾರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ಕರೆದೊಯ್ದರು.
ಪಿಎಸ್‌ಐ ಪರೀಕ್ಷೆಗಳು ಅಕ್ರಮವಾಗಿ ನಡೆದ ಹಿನ್ನೆಲೆಯಲ್ಲಿ ೫೪೩ ಹುದ್ದೆಗಳನ್ನು ನೇಮಕಾತಿಯನ್ನು ರದ್ದು ಮಾಡಿ ಡಿಸೆಂಬರ್ ೨೩ ರಂದು ಮರು ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿತ್ತು. ಪರೀಕ್ಷೆಗೆ ಕೆವಲ ೩೦ ದಿನಗಳ ಕಾಲಾವಕಾಶ ನೀಡಲಾಗಿದ್ದು, ಇನ್ನೂ ಹೆಚ್ಚಿನ ಕಾಲಾವಧಿ ನೀಡಬೇಕು ಎಂದು ಪರೀಕ್ಷಾರ್ಥಿಗಳು ಇಂದು ಕೃಷ್ಣಾ ಮುಂದೆ ಪ್ರತಿಭಟನೆ ನಡೆಸಿದರು.

ಕಣ್ಣೀರ ಮನವಿ
ಮಹಿಳೆಯೊಬ್ಬರು ತಮ್ಮ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ೨ ಬಾರಿ ಆಪರೇಷನ್ ಮಾಡಲಾಗಿದೆ. ಇನ್ನೂ ೨ ಆಪರೇಷನ್ ಮಾಡಬೇಕಾದ ಅಗತ್ಯವಿದೆ. ಇದಕ್ಕೆ ಪರಿಹಾರ ಒದಗಿಸಬೇಕೆಂದು ಕಣ್ಣೀರು ಹಾಕುವ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಶಿಕ್ಷಕರೊಬ್ಬರು ತಮ್ಮ ಮಗು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು ಇದರಿಂದಾಗಿ ತಾವು ಜೊತೆಯಲ್ಲಿದ್ದು ಮಗುವನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮನವಿ ಮಾಡಿದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು. ಉಳಿದಂತೆ ಅನೇಕರು ಕಣ್ಣೀರು ಹಾಕುತ್ತಾ ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಿ, ಪರಿಹಾರ ಒದಗಿಸುವಂತೆ ಮನವಿ ಮಾಡಿದ ದೃಶ್ಯಗಳು ಕಂಡು ಬಂದವು.