ಅಹಂಕಾರದಿಂದ ಸರ್ವನಾಶ: ಡಾ. ಶ್ರೇಯಾ ಮಹೀಂದ್ರಕರ್

ಬೀದರ: ಏ.18:ಪ್ರತಿ ವರ್ಷ ಶ್ರೀ ರಾಮನವಮಿಗೆ ಶ್ರೀ ರಾಮಜನ್ಮೋತ್ಸವವನ್ನು ನಾವು ಆಚರಿಸುತ್ತೇವೆ. ಶ್ರೀರಾಮ ನಮ್ಮ ಆದರ್ಶದ ಪ್ರತಿಕವಾಗಿದ್ದಾನೆ. ಮರ್ಯಾದೆ ಪುರುಷೋತ್ತಮ ರಾಮ ಮತ್ತು ರಾವಣರ ಮಧ್ಯೆ ಘೋರ ಯುದ್ಧವಾಗಿ ರಾವಣನ ಸಂಹಾರವಾಗುತ್ತದೆ. ನಿಜವಾಗಿಯೂ ನಾವು ನೋಡಿದರೆ ರಾವಣನ ಅಹಂಕಾರವೇ ರಾವಣನಿಗೆ ಸಂಹಾರ ಮಾಡಿತು ಎಂದು ಡಾ. ಶ್ರೇಯಾ ಮಹೀಂದ್ರಕರ್ ಕವಯಿತ್ರಿಯವರು ನುಡಿದರು.
ರಾಂಪುರೆ ಕಾಲೋನಿಯಲ್ಲಿರುವ ಶ್ರೀ ದತ್ತಾಶ್ರಮ ದೇವಾಲಯದ ಪ್ರಾಂಗಣದಲ್ಲಿ ಶ್ರೀ ದತ್ತಾಶ್ರಮ ಚಾರಿಟೇಬಲ್ ಟ್ರಸ್ಟ್ (ರಿ) ಬೀದರ ಇವರು ಏರ್ಪಡಿಸಿದ ಶ್ರೀ ರಾಮನವಮಿ ನಿಮಿತ್ಯ ಶ್ರೀ ರಾಮ ಜನ್ಮೋತ್ಸವ ಸ್ಪರ್ಧಾ ವಿಶೇಷ ಕಾರ್ಯಕ್ರಮವನ್ನು ಮುಂಜಾನೆ 10.30.ಗಂಟೆಗೆ ಉದ್ಘಾಟಿಸಿ ಮಾತನಾಡಿದರು.
ಅವರು ಮುಂದುವರಿದು ನಾವು ರಾಮನ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಚರಿತ್ರೆ ನಿರ್ಮಾಣ ಮಾಡಿಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಗಮೇಶರ ಬಿರಾದಾರವರು ಮಾತನಾಡಿ ಇಂದಿನ ಪರ್ವಕಾಲಗಳ ಸಂದರ್ಭಗಳಿಗೆ ಅನುಸಾರವಾಗಿ ಕಾರ್ಯಕ್ರಮಗಳನ್ನು ಏರ್ಪಡಿಸಿದರೆ ಮಕ್ಕಳಲ್ಲಿಯೂ ಸಂಸ್ಕಾರ ಮೂಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಡಾ. ಎಂ.ಜಿ. ದೇಶಪಾಂಡೆ ಅವರು ಮಾತನಾಡಿ ಇಂದಿನ ಯುವಜನಾಂಗದಲ್ಲಿ ಸಂಸ್ಕಾರವು ಮರೆಯಾಗುತ್ತಿರುವುದು ದುರ್ದೈವದ ಸಂಗತಿ. ಇಂತಹ ಹಬ್ಬಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತವೆ. ನಾವು ಎಂಥ ಸಂದರ್ಭದಲ್ಲಿ ಆದರ್ಶ ವ್ಯಕ್ತಿಗಳಾಗಿ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದರು. ರಾಮನು ಸಹ ನಮ್ಮ ಆದರ್ಶಕ್ಕೆ ಬೆಳಕಾಗುತ್ತಾನೆ ಎಂಬುದಕ್ಕೆ ಸಂದೇಹವಿಲ್ಲ ಎಂದು ನುಡಿದರು.ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಕಿರಣಮಹಾರಾಜರು ಆಶೀರ್ವಚನ ಮಾಡಿದರು.
ಪ್ರಾರಂಭದಲ್ಲಿ ಕುಮಾರಿ ಪಲ್ಲವಿ ಸ್ವಾಗತ ಕೋರಿದರು. ಶ್ರೀ ಪ್ರೇಮ ಅವಿನಾಶ ನಿರೂಪಣೆ ಮಾಡಿದರು. ಕಲ್ಯಾಣರಾವ ಮರುಕುಂದ ಕಾಡವಾದ ಸಂಗೀತವನ್ನು ನಡೆಸಿಕೊಟ್ಟರು. ಕುಮಾರಿ ಆಸ್ಥಾ ನೃತ್ಯ ಮಾಡಿದರು. ಕಾರ್ಯಕ್ರಮದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು. ಶ್ರೀಮತಿ ಅಂಕಿತ ಬಚ್ಚನ್ ಅವರು ಕಾರ್ಯಕ್ರಮಕ್ಕೆ ವಂದಿಸಿದರು.