ಅಸ್ಸಾಂ ರಸ್ತೆಗಳ ಅಭಿವೃದ್ಧಿ ಸಚಿವ ಗಡ್ಕರಿ ಭರವಸೆ

ಧರ್ಮಪೂರ್ ( ಅಸ್ಸಾಂ), ಮಾ. ೨೭: ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಎರಡನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ೨ ಲಕ್ಷ ಕೋಟಿ ಮೌಲ್ಯದ ರಸ್ತೆ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಅಸ್ಸಾಂನ ಧರ್ಮಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಎರಡನೇ ಅವಧಿಗೆ ಮರು ಆಯ್ಕೆಯಾದರೆ ಅಸ್ಸಾಂ ದೇಶದ ಅಗ್ರ ರಾಜ್ಯಗಳಲ್ಲಿ ಒಂದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಧಿಕಾರಾವಧಿಯಲ್ಲಿ ೩೦ ಸಾವಿರ ಕೋಟಿ ರೂಪಾಯಿ ಮೌಲ್ಯದ ರಸ್ತೆಗಳನ್ನು ಅಸ್ಸಾಂನಲ್ಲಿ ಪೂರ್ಣಗೊಳಿಸಲಾಗಿದೆ. ೫೦ ಸಾವಿರ ಕೋಟಿ ಮೌಲ್ಯದ ರಸ್ತೆಗಳಿಗೆ ಮಂಜೂರಾತಿ ನೀಡಲಾಗಿದೆ. ಸದ್ಯ ೩೫ ಸಾವಿರ ಕೋಟಿ ಮೌಲ್ಯದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮತ್ತೆ ೨ ಲಕ್ಷ ಕೋಟಿ ಮೌಲ್ಯದ ರಸ್ತೆ ಯೋಜನೆಗಳನ್ನು ಅಸ್ಸಾಂನಲ್ಲಿ ಜಾರಿಗೆ ತರಲಾಗುವುದು ಎಂದ ಗಡ್ಕರಿ, ಬಡತನ ನಿರ್ಮೂಲನೆಗೆ ಸರಕಾರ ೧,೩೦೦ ಕೋಟಿ ರೂ.ಗಳ ಬಿದಿರು ಮಿಷನ್ಗೆ ಅನುಮೋದನೆ ನೀಡಿದ ನಂತರವಷ್ಟೇ ಅಸ್ಸಾಂ ಅಭಿವೃದ್ಧಿ ಸಾಧ್ಯ ಎಂದರು.

ಧರ್ಮಪುರದಲ್ಲಿ ಕಾಂಗ್ರೆಸ್ಸಿನ ಮೋನಿನೇ ರತುಲ್ ಪಟೋವಾರಿ ವಿರುದ್ಧ ಬಿಜೆಪಿ ಅಭ್ಯರ್ಥಿ ಮತ್ತು ಸಚಿವ ಚಂದ್ರ ಮೋಹನ್ ಪಟೋವಾರಿ ಪರ ಬಿಜೆಪಿ ನಾಯಕರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಅಸ್ಸಾಂನಲ್ಲಿ ಏಪ್ರಿಲ್ ೬ರಂದು ಮೂರನೇ ಹಂತದ ವಿಧಾನಸಭಾ ಚುನಾವಣೆ ನಡೆಯಲಿದೆ.