ಅಸ್ಸಾಂ ಪ್ರವಾಹ : ಸಂತ್ರಸ್ತರ ನೆರವಿಗೆ ಬಂದ ಅನುಷ್ಕಾ ದಂಪತಿ


ಗುವಾಹತಿ, ಜುಲೈ 30- ಅಸ್ಸಾಂ ಮತ್ತು ಬಿಹಾರ ಪ್ರವಾಹದಿಂದ ಸಂತ್ರಸ್ತರಾದವರಿಗೆ ಬೆಂಬಲ ನೀಡುವುದಾಗಿ ಅನುಷ್ಕಾ ದಂಪತಿ ಮುಂದಾಗಿದ್ದಾರೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ ಈ ಕುರಿತು ಟ್ವೀಟ್ ಮಾಡಿದ್ದು, “ನಮ್ಮ ದೇಶವು ಕೊರೋನಾ ವೈರಸ್ ಸಾಂಕ್ರಾಮಿಕದ ಬಿಕ್ಕಟ್ಟಿನಲ್ಲಿರುವಾಗಲೇ, ಅಸ್ಸಾಂ ಮತ್ತು ಬಿಹಾರದ ಪ್ರವಾಹ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಅನುಷ್ಕಾ ಮತ್ತು ನಾನು ಪ್ರವಾಹ ಪರಿಹಾರ ಮತ್ತು ಕಲ್ಯಾಣ ಕಾರ್ಯಕ್ಕೆ ಮಾಡುತ್ತಿರುವ ಸಂಸ್ಥೆಗಳನ್ನು ಬೆಂಬಲಿಸುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದ್ದೇವೆ.” ಎಂದಿದ್ದಾರೆ.
ಅಸ್ಸಾಂನ 33 ಜಿಲ್ಲೆಗಳಲ್ಲಿ 21 ರಲ್ಲಿ 1,536 ಹಳ್ಳಿಗಳಲ್ಲಿ 1.6 ಮಿಲಿಯನ್ ಜನರು ಪ್ರವಾಹದಿಂದ ಬಳಲುತ್ತಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದಾಗಿ ರಾಜ್ಯದಲ್ಲಿ 100 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ಹಲವು ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.
ಈ ಮೊದಲು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಕೂಡ ಅಸ್ಸಾಂನ ಜನರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿ “ಮಾರ್ಚ್‌ನಲ್ಲಿ ಅಸ್ಸಾಂ ಪ್ರವಾಸದಲ್ಲಿ ನಾನು ಭೇಟಿಯಾದ ಎಲ್ಲ ಸುಂದರ ಜನರೊಂದಿಗೆ ನನ್ನ ಆಲೋಚನೆಗಳು ಇವೆ, ಅಲ್ಲಿ ಪ್ರಸ್ತುತ ಭೀಕರ ಮಾರಣಾಂತಿಕ ಪ್ರವಾಹವದಿಂದ ಜೀವಗಳು ನಾಶವಾಗುತ್ತಿದೆ. ದಯವಿಟ್ಟು ಸುರಕ್ಷಿತವಾಗಿರಿ! ” ಎಂದು ಟ್ವೀಟ್ ಮಾಡಿದ್ದರು