ಅಸ್ಸಾಂ : ಎನ್‌ಆರ್‌ಸಿ ತಿದ್ದುಪಡಿ: ಬಿಜೆಪಿ ಭರವಸೆ

ಗುವಾಹಟಿ,ಮಾ.೨೩- ಅಸ್ಸಾಂ ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ (ಎನ್‌ಆರ್‌ಸಿ) ದಾಖಲಾತಿಗೆ ತಿದ್ದುಪಡಿ ತರಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಶ್ವಾಸನೆ ನೀಡಿದ್ದಾರೆ.
ಗುವಾಹಟಿಯಲ್ಲಿಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ನಿಜವಾದ ಭಾರತೀಯ ಪ್ರಜೆಗಳನ್ನು ರಕ್ಷಿಸಲು ಮತ್ತು ಗಡಿಯೊಳಕ್ಕೆ ಅಕ್ರಮವಾಗಿ ಒಳ ನುಸುಳುವವರನ್ನು ಪತ್ತೆ ಹಚ್ಚಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಅಸ್ಸಾಂನ ಹಿತರಕ್ಷಣೆಗಾಗಿ ಎನ್‌ಆರ್‌ಸಿಗೆ ತಿದ್ದುಪಡಿ ಮಾಡಲಿದ್ದೇವೆ. ಅಸ್ಸಾಂ ನಾಗರಿಕತೆ ಸುರಕ್ಷಿತವಾಗಿರುವುದನ್ನು ದೃಢಪಡಿಸಿಕೊಳ್ಳಲು ನಿಜವಾದ ಭಾರತೀಯರನ್ನು ರಕ್ಷಿಸುತ್ತೇವೆ. ಹಾಗೆಯೇ ಒಳ ನುಸುಳುವವರನ್ನು ಪತ್ತೆ ಹಚ್ಚಿ ಅಸ್ಸಾಂನ ರಾಜಕೀಯ ಹಕ್ಕುಗಳನ್ನು ರಕ್ಷಿಸುತ್ತೇವೆ ಎಂದು ಹೇಳಿದರು.
ಬ್ರಹ್ಮಪುತ್ರ ನದಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸಂರಕ್ಷಿಸಲು ನದಿಯ ಆಸುಪಾಸಿನಲ್ಲಿ ಬೃಹತ್ ಅಣೆಕಟ್ಟೆಗಳನ್ನು ನಿರ್ಮಿಸಿ ಪ್ರವಾಹದಿಂದ ಜನರನ್ನು ರಕ್ಷಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆಯ ಮಹಾಪೂರವನ್ನೇ ಹರಿಸಿದೆ.
೩೦ ಲಕ್ಷ ಅರ್ಹ ಕುಟುಂಬಗಳಿಗೆ ಒರುನೊಡಾಯ್ ಯೋಜನೆಯಡಿ ಪ್ರತಿತಿಂಗಳಿಗೆ ೩ ಸಾವಿರ ರೂ.ಗಳನ್ನು ನೀಡುವುದಾಗಿ ಪ್ರಣಾಳಿಕೆಯಲ್ಲಿ ಬಿಜೆಪಿ ಆಶ್ವಾಸನೆ ನೀಡಿದೆ.
ಕಳೆದವಾರ ಕಾಂಗ್ರೆಸ್ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಮಾಡಿ ಅಸ್ಸಾಂ ರಾಜ್ಯದ ಕಲ್ಪನೆಯನ್ನು ಸಮರ್ಪಿಸುವುದಾಗಿ ಭರವಸೇ ನೀಡಿತ್ತು. ಈ ತಿಂಗಳ ೨೭ ರಿಂದ ೩ ಹಂತಗಳಲ್ಲಿ ೧೨೬ ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಮತದಾನ ನಡೆಯಲಿದೆ. ಮೇ ೨ ರಂದು ಫಲಿತಾಂಶ ಪ್ರಕಟವಾಗಲಿದೆ.