ಅಸ್ವಸ್ಥರ ಆರೋಗ್ಯ ವಿಚಾರಿಸಿದ ಡಾ. ಶಿಂಧೆ

ಔರಾದ್ :ಜೂ.23: ತಾಲೂಕಿನ ಕರಕ್ಯಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳ ಆರೋಗ್ಯವನ್ನು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಭೇಟಿ ನೀಡಿ ವಿಚಾರಿಸಿದರು. ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾದ ಹಾಗೂ ಇಲ್ಲಿಯವರೆಗೆ ಗುಣಮುಖರಾದವರ ಬಗ್ಗೆ ಮಾಹಿತಿ ಪಡೆದರು. ಪ್ರತಿಯೊಬ್ಬ ರೋಗಿಗಳ ವೈಯಕ್ತಿಕ ಕಾಳಜಿ ವಹಿಸಿ ಉತ್ತಮ ಚಿಕಿತ್ಸೆ ನೀಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರವಿದ್ದು, ಆಸ್ಪತ್ರೆಯ ಯಾವುದೇ ಅಭಿವೃದ್ಧಿ ಕೆಲಸವಾದರೂ ನನಗೆ ತಿಳಿಸಿ ಸರಕಾರದ ಗಮನಕ್ಕೆ ತಂದು ಅನುದಾನ ತರುವದಾಗಿ ವೈದ್ಯರಿಗೆ ಭರವಸೆ ನೀಡಿದರು. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ವೈದ್ಯರಿಗೆ ತಿಳಿಸಿದರು.

ಕರಕ್ಯಾಳ ಗ್ರಾಮದಲ್ಲಿ ಆಗಿರುವ ಪ್ರಕರಣ ಗಂಭೀರವಾಗಿದ್ದು, ತಾಲೂಕಿನ ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿವ ನೀರನ್ನು ವ್ಯವಸ್ಥಿತವಾಗಿ ಪೂರೈಕೆ ಮಾಡುವುದರ ಜತೆಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಸ್ಥಗಿತಗೊಂಡ ಶುದ್ಧ ಕುಡಿವ ನೀರಿನ ಘಟಕಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದು ಎಲ್ಲವನ್ನು ಸರಿಪಡಿಸಬೇಕು ಎಂದರು. ಈ ವೇಳೆ ಪಪಂ ಮಾಜಿ ಅಧ್ಯಕ್ಷ ಸುನಿಲಕುಮಾರ ದೇಶಮುಖ, ಕಾಂಗ್ರೆಸ್ ಮುಖಂಡ ಡಾ. ಮಹೇಶ ಫುಲಾರಿ, ಆಡಳಿತ ವೈದ್ಯಾಧಿಕಾರಿ ಡಾ. ರಮಣ ಪೋಕಲವಾರ್, ಡಾ. ರಾಜಕುಮಾರ ಬುಕ್ಕಾ ಸೇರಿದಂತೆ ಅನೇಕರಿದ್ದರು.

ಜನರ ಸಮಸ್ಯೆಗೆ ಸ್ಪಂದಿಸಿ

ಗ್ರಾ.ಪಂ ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸಬೇಕು ಎಂದು ಮುಖಂಡ ಡಾ. ಭೀಮಸೇನರಾವ ಶಿಂಧೆ ಹೇಳಿದರು. ಅಧಿಕಾರಿಗಳು ನಿರಂತರವಾಗಿ ಸ್ಥಳೀಯ ಸಮಸ್ಯೆಗಳನ್ನು ತಿಳಿದು ಬಗೆಹರಿಸುವ ಕೆಲಸ ಮಾಡಬೇಕು. ಮುಖ್ಯವಾಗಿ ಕುಡಿವ ನೀರು, ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು. ಕುಡಿವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು. ಕರ್ತವ್ಯ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕಾಗಿ ಸರಕಾರಕ್ಕೆ ಪತ್ರ ಬರೆಯುವದಾಗಿ ಶಿಂಧೆ ಎಚ್ಚರಿಕೆ ನೀಡಿದ್ದಾರೆ.