ಅಸ್ವಸ್ಥರ ಆರೋಗ್ಯ ವಿಚಾರಿಸಿದ ಜಿ.ಪಂ ಸಿಇಒ

*ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿ.ಪಂ ಸಿಇಒ ಭೇಟಿ
*ಕುಡಿವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾದರೆ ಕ್ರಮ.
ಅರಕೇರಾ : ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ರೋಗಿಗಳ ಆರೋಗ್ಯವನ್ನು ಭಾನುವಾರ ಜಿ.ಪಂ ಸಿಇಒ ಶಶಿಧರ ಕುರೇರ ಭೇಟಿ ನೀಡಿ ವಿಚಾರಿಸಿದರು.
ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾದ ಹಾಗೂ ಇಲ್ಲಿಯವರೆಗೆ ಗುಣಮುಖರಾದವರ ಬಗ್ಗೆ ಮಾಹಿತಿ ಪಡೆದರು. ಪ್ರತಿಯೊಬ್ಬ ರೋಗಿಗಳ ವೈಯಕ್ತಿಕ ಕಾಳಜಿ ವಹಿಸಿ ಉತ್ತಮ ಚಿಕಿತ್ಸೆ ನೀಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರೇಕಲಮರಡಿ ಗ್ರಾಮದಲ್ಲಿ ಆಗಿರುವ ಪ್ರಕರಣ ಗಂಭೀರವಾಗಿದ್ದು, ಜಿಲ್ಲೆಯ ೧೭೯ ಗ್ರಾ.ಪಂ ಪಿಡಿಒ ಗಳ ಸಭೆ ಕರೆಯಲಾಗಿದೆ. ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿವ ನೀರನ್ನು ವ್ಯವಸ್ಥಿತವಾಗಿ ಪೂರೈಕೆ ಮಾಡುವುದರ ಜತೆಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸ್ಥಗೀತಗೊಂಡ ಶುದ್ಧ ಕುಡಿವ ನೀರಿನ ಘಟಕಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಎಲ್ಲವನ್ನು ಸರಿಪಡಿಸಲಾಗುವುದು ಎಂದರು.
ಪಿಡಿಒಗಳು ಕೇಂದ್ರ ಸ್ಥಾನದಲ್ಲಿರಬೇಕು :
ಜಿಲ್ಲೆಯ ಎಲ್ಲ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಪಂಚಾಯತಿ ಕೇಂದ್ರ ಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸಬೇಕು. ನಿರಂತರವಾಗಿ ಸ್ಥಳೀಯ ಸಮಸ್ಯೆಗಳನ್ನು ತಿಳಿದು ಬಗೆಹರಿಸುವ ಕೆಲಸ ಮಾಡಬೇಕು. ಮುಖ್ಯವಾಗಿ ಕುಡಿವ ನೀರು, ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಗ್ರಾ.ಪಂ ವಿಶೇಷ ಕಾಳಜಿ ವಹಿಸಬೇಕು. ಕುಡಿವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು. ಕರ್ತವ್ಯ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿ.ಪಂ ಸಿಇಒ ಶಶಿಧರ ಕುರೇರ ಎಚ್ಚರಿಸಿದರು.
ಡಿಎಚ್‌ಒ ಡಾ.ಸುರೇಂದ್ರಬಾಬು, ಗ್ರೇಡ್-೨ ತಹಸೀಲ್ದಾರ ಶ್ರೀನಿವಾಸ ಚಾಪೇಲ್, ಇಒ ಪಂಪಾಪತಿ ಹಿರೇಮಠ, ಟಿಎಚ್‌ಒ ಡಾ.ಬನದೇಶ್ವರ, ಆಡಳಿತ ವೈದ್ಯಾಧಿಕಾರಿ ಶಿವಕುಮಾರ ನಾರಾ, ಕಂದಾಯ ನಿರೀಕ್ಷಕ ಬಸವರಾಜ ಹೂನುರು ಇತರರಿದ್ದರು.