ಅಸ್ಪೃಶ್ಯತೆ ನಿವಾರಣೆಗೆ ಕೈಜೋಡಿಸಲು ಕರೆ

ಜಗಳೂರು.ಏ.೨; : ಅಸ್ಪೃಶ್ಯತೆ ನಿವಾರಣೆಗೆ ಕೈಜೋಡಿಸಿ  ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಕರೆ ನೀಡಿದರು.ಪಟ್ಟಣದ  ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಾಧನ ಕಲಾತಂಡ ಇವರುಗಳ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಅಸ್ಪೃಶ್ಯತಾ ನಿವಾರಣಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಸ್ಪೃಶ್ಯತೆ ಆಚರಿಸಿದರೆ ಕಠಿಣ  ಕಾನೂನು ಕ್ರಮಗಳು ಜಾರಿಯಲ್ಲಿದ್ದರೂ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿರುವುದು ವಿಷಾಧನೀಯ ಆಂದೋಲನದ ಮೂಲಕ ಜಾಗೃತಿ ಮೂಡಿಸಿದಾಗ ಮಾತ್ರ ಅಸ್ಪೃಶ್ಯತೆ ತೊಲಗಿಸಲು  ಸಾಧ್ಯ.ಸಾಮಾಜಿಕ ಕಾರ್ಯಕ್ರಮಗಳನ್ನು ವೈಜ್ಞಾನಿಕ ದೃ಼ಷ್ಠಿಕೋನದಿಂದ ನೋಡಿದಾಗ ಮಾತ್ರ ಸಮಾಜಕ್ಕೆ ಅಂಟಿಕೊಂಡಿರುವ ಅಸ್ಪೃಶ್ಯತೆ, ಜಾತಿಪದ್ದತಿ,ಕಳಂಕಗಳನ್ನು ಹೋಗಲಾಡಿಸಬಹುದು ಎಂದರು.
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿ ಯುವಸಮೂಹ ಜಾಗೃತರಾಗಿ ಸಂವಿಧಾನದ ಆಶಯಗಳನ್ನುಈಡೇರಿಸಬೇಕು ಎಂದರು.
ದಲಿತ ಸಂಘಟನೆ ಒಕ್ಕೂಟದ ಅಧ್ಯಕ್ಷ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ,ಮನುಸ್ಮೃತಿ ಆಚರಿಸುವ ವಿಕೃತ ಮನಸ್ಸುಗಳು ಬದಲಾಗಬೇಕು.ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು.ದಲಿತರ ಮೇಲಿನ ದೌರ್ಜನ್ಯ ಮಹಿಳೆಯರ ಮೇಲಿನ ಅತ್ಯಾಚಾರ,ಶೋಷಣೆ ಮುಕ್ತ ಸಮಾಜಕ್ಕೆ ಜಾಗೃತಿ ಅಗತ್ಯ .ಉತ್ತಮ ಶಿಕ್ಷಣ ಪಡೆದು ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಮುಂದಾಗಬೇಕು ಎಂದರು.
ಎಐಎಸ್ ಎಫ್ ಮುಖಂಡ ಮಾದಿಹಳ್ಳಿಮಂಜಪ್ಪ ಮಾತನಾಡಿ,ದೇಶದಲ್ಲಿ ಶ್ರೇಷ್ಠ ಗ್ರಂಥ ಸಂವಿಧಾನವಾಗಿದ್ದು ಸಂವಿಧಾನದ ಉಳಿವಿಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು.ದಲಿತ ಸಮುದಾಯದಲ್ಲಿ ಜನಿಸಿರುವುದು ಶಾಪಗ್ರಸ್ಥವಲ್ಲ. ಎಂದರು.ದೇಶದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರನ್ನು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಲ್ಲಾ ಸಮುದಾಯಕ್ಕೂ ಮೀಸಲಾತಿ ಕಲ್ಪಿಸಿದ ಬಾಬಾಸಾಹೇಬರ ಮೇಲಿನ ಅಪವಾದ ಕಳಂಕ ಹೋಗಲಾಡಿಸುವ ಜವಾಬ್ದಾರಿ ಯುವ ಸಮೂಹದ ಮೇಲಿದೆ ಎಂದರು.ಸಾಧನ ಕಲಾತಂಡದ ಗ್ಯಾಸ್ ಓಬಣ್ಣ ಅವರ ನೇತೃತ್ವದಲ್ಲಿ  ಜಾಗೃತಿಗೀತೆಗಳು ಹಾಗೂ ಅಸ್ಪೃಶ್ಯತೆ ನಿವಾರಣೆ ಜಾಗೃತಿ ನಿದರ್ಶನದ  ನಾಟಕ ಅಭಿನಯಿಸಲಾಯಿತು.
ಈ ಸಂದರ್ಭದಲ್ಲಿ ಪ್ರಭಾರಿ  ಪ್ರಾಂಶುಪಾಲ ವಾಮದೇವಪ್ಪ,ಉಪನ್ಯಾಸಕರಾದ ಶಶಿಕಲಾ,ಅಜ್ಜಯ್ಯ,ಸಂತೋಷ್ ,ಕಲಾತಂಡದ ಪರುಶರಾಮ್,ನಾಗರಾಜ್ ,ಶಶಿಕಲಾ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.