ಅಸ್ಪೃಶ್ಯತೆ ಆಚರಣೆ ಕಂಡುಬಂದರೆ ಕಾನೂನು ಕ್ರಮ – ಎಸ್ಪಿ ಶ್ರೀಹರಿಬಾಬು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 29:- ಅಸ್ಪೃಶ್ಯತೆ ಆಚರಣೆ ಇರುವ ಬಗ್ಗೆ ದೂರು ಬಂದಲ್ಲಿ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯನಗರ ಜಿಲ್ಲಾ ಎಸ್ಪಿ ಬಿ ಎಲ್ ಶ್ರೀಹರಿಬಾಬು ತಿಳಿಸಿದರು.
ಅವರು ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಕೂಡ್ಲಿಗಿ ಪೊಲೀಸ್ ಉಪ ವಿಭಾಗದ ವತಿಯಿಂದ ಆಯೋಜಿಸಿದ ದಲಿತರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತ  ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರವಾಗಿದ್ದು, ಇಂತಹ ಅನಿಷ್ಟ ಪದ್ಧತಿ ಆಚರಣೆ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದಲಿತ ಮುಖಂಡರು ತಿಳಿಸಿದಂತೆ ಕಕ್ಕುಪ್ಪಿ ಗ್ರಾಮದಲ್ಲಿ ನೀರಿನ ಟ್ಯಾಂಕ್ ಮೇಲೆ ಜೈಭೀಮ್ ಎಂದು ಬರೆದಿದ್ದಕ್ಕೆ ಗ್ರಾಮದಲ್ಲಿ ಕೆಲವರು ಆಕ್ಷೇಪ ಎತ್ತುತ್ತಿದ್ದು, ಆ ಬಗ್ಗೆ ಗಮನ  ಹರಿಸಬೇಕು ಎಂದು ದಲಿತ ಮುಖಂಡರು ತಿಳಿಸುತ್ತಿದ್ದಂತೆ ಎಸ್ಪಿ ಶ್ರೀಹರಿಬಾಬು  ಕೂಡ್ಲಿಗಿ ಸಿಪಿಐ ಹಾಗೂ ಪಿಎಸ್ಐ ಅವರುಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅದರ ಮಾಹಿತಿಯನ್ನು ಸೋಮವಾರ ಸಂಜೆ  ನನಗೆ ತಿಳಿಸುವಂತೆ ಸೂಚಿಸಿದರು.
ಮುಖಂಡರಾದ ಕಾವಲಿ ಶಿವಪ್ಪನಾಯಕ ಮಾತನಾಡಿ ದಲಿತ ಕೇರಿಗಳಲ್ಲಿ ಅಧಿಕಾರಿಗಳು ಭೇಟಿ ನೀಡಿ ದಲಿತ ಸಭೆ ನಡೆಸಿದರೆ ಅಲ್ಲಿನ ಜನರ ಸಮಸ್ಯೆ ತಿಳಿಯಬಹುದಾಗಿದೆ ಅಲ್ಲದೆ ಕೂಡ್ಲಿಗಿಯಲ್ಲಿ ಸುಮಾರು ವರ್ಷಗಳಿಂದ ಇದ್ದ ಸಬ್ ಜೈಲ್ ಕಾರಣಾಂತರಗಳಿಂದ ಅದನ್ನು ಹಡಗಲಿಗೆ ಸ್ಥಳಾಂತರ ಮಾಡಲಾಯಿತು ಇದರಿಂದ ಕೂಡ್ಲಿಗಿಯಂತಹ ಹಿಂದುಳಿದ ತಾಲೂಕಿನ ಜನತೆಗೆ ಅಲ್ಲಿಗೆ ಹೋಗಿಬರಲು ತುಂಬಾ ತೊಂದರೆಯಾಗುತ್ತದೆ ಮೊದಲಿದ್ದಂತೆ ಸಬ್ ಜೈಲ್ ಪುನರಾರಂಭವಾಗಬೇಕಿದೆ ಹಾಗೂ ಪೊಲೀಸ್ ವಸತಿ ಗೃಹಗಳ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡುವ ಜೊತೆಗೆ ಆ ಸ್ಥಳದಲ್ಲಿ ಮಳಿಗೆಗಳು ನಿರ್ಮಿಸಿದರೆ ಅನೇಕ ಜನರು ಸ್ವಯಂ ಉದ್ಯೋಗ ಜೀವನ ನಡೆಸಲು ಅನುಕೂಲವಾಗಲಿದೆ ಇದರ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಎಸ್ಪಿಯವರಿಗೆ ಮನವಿ ಮಾಡಿದರು.
ಕೂಡ್ಲಿಗಿ ಸಾಲುಮನಿ ರಾಘವೇಂದ್ರ,ಕೊಟ್ಟೂರು ಮರಿಸ್ವಾಮಿ, ಕಾನಮಡುಗು ದುರುಗಪ್ಪ ಸೇರಿ ಅನೇಕರು ಮಾತನಾಡಿ, ಹಳ್ಳಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದ ಡಾಬಾಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಯಬೇಕು. ಇದರಿಂದ ಹಳ್ಳಿಗಳಲ್ಲಿ ಬಡವರೇ ಹೆಚ್ಚಾಗಿ ಮದ್ಯ ಸೇವನೆಗೆ ದಾಸರಾಗುವುದರಿಂದ ಅವರ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಅಲ್ಲದೆ, ಕೂಡ್ಲಿಗಿ ಪಟ್ಟಣದ ಸಂಡೂರು ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಸಂಚಾರ ಇರುವುದರಿಂದ ಈ ಬಗ್ಗೆ ವಾಹನ ದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು. ಕೊಟ್ಟೂರು ಪಟ್ಟಣದಲ್ಲಿ ದಲಿತರಿಗೆ ಮನೆಬಾಡಿಗೆ ಕೊಡಲು ಹಾಗೂ ಸೈಟ್ ಕೊಡುವಲ್ಲಿಯೂ ಹಿಂದೇಟು ಹಾಕುತ್ತಿದ್ದಾರೆ ನಮ್ಮಂತೆ ಅವರನ್ನು ಸಭೆ ಕರೆದು ಈ ರೀತಿ ಮಾಡುವ ತಪ್ಪುಗಳಿಗೆ ಅಂಕಿತ ಹಾಕಬೇಕು ಎಂದರು.
ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಜತೆಗೆ ಪಟ್ಟಣದ ಸಂಡೂರು ರಸ್ತೆಯ ವಾಹನ ದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಶ್ರೀಹರಿಬಾಬು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರ, ಹಗರಿಬೊಮ್ಮಹಳ್ಳಿ, ಸಿಪಿಐ ಮಂಜುನಾಥ,ಕೊಟ್ಟೂರು ಸಿಪಿಐ ವೆಂಕಟಸ್ವಾಮಿ ಉಪಸ್ಥಿತರಿದ್ದರು  ಪಿಎಸ್‌ಐ ಧನಂಜಯ ಸ್ವಾಗತಿಸಿದರು.
ದಲಿತ ಮುಖಂಡರಾದ ಕಾವಲಿ ಶಿವಪ್ಪನಾಯಕ, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಮರಬನಹಳ್ಳಿ ಮಾರಪ್ಪ, ನಿವೃತ್ತ ಯೋಧ ರಮೇಶ್, ಸಾಲುಮನಿ ರಾಘವೇಂದ್ರ, ಕಾನಮಡುಗು ದುರುಗಪ್ಪ, ಫಕ್ಕೀರಪ್ಪ, ಕೊಟ್ಟೂರು ಮರಿಸ್ವಾಮಿ, ಮಾಕನಡುಕು ಕುಮಾರ್, ಜಿ.ಓಬಣ್ಣ, ಹಿರೇಹೆಗ್ಡಾಳ್ ಮಹೇಶ್, ಸಿಪಿಐ ಮುಖಂಡ ವೀರಣ್ಣ ಪ ಪಂ ಸದಸ್ಯ ಪೂರ್ಯಾನಾಯ್ಕ್  ಕುಬೇರಪ್ಪ, ಬಂಗಿ ಕೊಟ್ರೇಶ, ಜಯರಾಮ ನಾಯಕ, ರಾಘವೇಂದ್ರ, ದುರುಗಪ್ಪ, ನಾಗಪ್ಪ, ಪಕ್ಕೀರಪ್ಪ, ಪರಶುರಾಮ, ಲಕ್ಷ್ಮಣ, ಮೂಗಪ್ಪ, ಬಸಪ್ಪ, ರವಿಕಿರಣ ಸೇರಿ ಇತರರಿದ್ದರು