ಅಸ್ಪೃಶ್ಯತೆಯನ್ನು ತೊಲಗಿಸೋಣ ಎಂದು ಪ್ರತಿಜ್ಞೆ

ಸಂಜೆವಾಣಿ ವಾರ್ತೆ
ಕೊಪ್ಪಳ, ಸೆ.25: ತಾಲೂಕಿನ ಬೇವಿನಾಳದಲ್ಲಿ ಸವರ್ಣಿಯ ಹಾಗೂ ದಲಿತ ಸಮುದಾಯ ಸಭೆ ನಡೆಸಿರುವ ಪೊಲೀಸರು ಅಸ್ಪೃಶ್ಯತೆ, ಅನಿಷ್ಟ ಪದ್ಧತಿ. ಅದನ್ನು ತೊಲಗಿಸೋಣ ಎಂದು ಗ್ರಾಮಸ್ಥರ ಬಳಿ ಪ್ರತಿಜ್ಞೆ ಮಾಡಿಸಿದ್ದಾರೆ.
ಕೊಪ್ಪಳ : ದಲಿತ ಸಮುದಾಯದ ಬಾಲಕ ದೇಗುಲ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಿದ್ದ ಪ್ರಕರಣ ನಡೆದ ಬೆನ್ನಲ್ಲೇ ಕೊಪ್ಪಳ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಘಟನೆ ನಡೆಯದಂತೆ ತಡೆಯಲು ಮತ್ತು ಜನಜಾಗೃತಿ ಮೂಡಿಸಲು ಕೊಪ್ಪಳ ಪೊಲೀಸರು ಹೆಜ್ಜೆ ಇಟ್ಟಿದ್ದಾರೆ. ಕೊಪ್ಪಳದ ತಾಲೂಕಿನ ಬೇವಿನಾಳದಲ್ಲಿ ಸವರ್ಣಿಯ ಹಾಗೂ ದಲಿತ ಸಮುದಾಯ ಸಭೆ ನಡೆಸಿರುವ ಪೊಲೀಸರು ಅಸ್ಪೃಶ್ಯತೆ, ಅನಿಷ್ಟ ಪದ್ಧತಿ. ಅದನ್ನು ತೊಲಗಿಸೋಣ ಎಂದು ಗ್ರಾಮಸ್ಥರ ಬಳಿ ಪ್ರತಿಜ್ಞೆ ಮಾಡಿಸಿದ್ದಾರೆ.
ಕೊಪ್ಪಳದ ಮಿಯಾಪೂರದಲ್ಲಿ ದಲಿತ ಬಾಲಕ ದೇವಸ್ಥಾನ ಪ್ರವೇಶಿದ್ದಕ್ಕೆ ದಂಡ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಕುಷ್ಟಗಿ ಪೊಲೀಸರು ಬಂಧಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ದೂರು ಆಧರಿಸಿ ಕನಕಪ್ಪ ಪೂಜಾರಿ, ಹನುಮಗೌಡ, ಗವಿ ಸಿದ್ದಪ್ಪ ಮ್ಯಾಗೇರಿ, ವಿರುಪಾಕ್ಷಗೌಡ ಮ್ಯಾಗೇರಿ, ಹಾಗೂ ಶರಣಗೌಡ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸೆಪ್ಟೆಂಬರ್ 4 ರಂದು ತನ್ನ ಹುಟ್ಟು ಹಬ್ಬ ಇದ್ದ ಕಾರಣ ನಾಲ್ಕು ವರ್ಷದ ದಲಿತ ಚೆನ್ಮದಾಸರ ಸಮುದಾಯದ ಬಾಲಕ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಿಯಾಪೂರ ಗ್ರಾಮದಲ್ಲಿನ ದೇವಸ್ಥಾನಕ್ಕೆ ಪ್ರವೇಶಿಸಿದ್ದ. ದಲಿತ ಬಾಲಕ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ದೇವಸ್ಥಾನದ ಅರ್ಚಕ ಹಾಗೂ ಗ್ರಾಮಸ್ಥರು ದೇವಾಲಯಕ್ಕೆ ಸ್ಯಾನಿಟೈಸರ್ ಹೊಡೆಯಲು ದಂಡ ಹಾಕಿದ್ದರು.
ಇದಾದ ಬಳಿಕ ಗ್ರಾಮದಲ್ಲಿ ಕಂದಾಯ ಅಧಿಕಾರಿಗಳು, ಪೊಲೀಸರು ಶಾಂತಿ ಸಭೆ ಮಾಡಿದ್ರು. ವಿಷಯ ಗಂಭೀರವಾಗಿದ್ರೂ ಬಾಲಕನ ತಂದೆ ದೂರು ಕೊಡಲು ನಿರಾಕರಿಸಿದ್ದರು. ಬಾಲಕನ ತಂದೆ ನಿರಾಕರಣೆ ಮಾಡಿದ ಹಿನ್ನಲೆ ಸಮಾಜ ಕಲ್ಯಾಣ ಅಧಿಕಾರಿಗಳಿಂದ ದೂರು ದಾಖಲಿಸಿದ್ದರು. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ದ IPC ಸೆಕ್ಷನ್ 504, 149, SC-ST ಆಯಕ್ಟ್ 2005ರಡಿಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಈಗ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಐವರ ವಿಚಾರಣೆ ನಡೆದಿತ್ತು.