ಅಸ್ತಿತ್ವ ಕಳೆದುಕೊಳ್ಳುತ್ತಿರುವ ಸೈಕಲ್ ರಿಕ್ಷಾ

ನಜೀರ್ ಮಿಯಾನ್ ಹಟ್ಟಿ
ಕಲಬುರಗಿ,ಡಿ.1- ಕಳೆದ ನಾಲ್ಕೂವರೆ ಐದು ದಶಕಗಳ ಹಿಂದೆ ಎಲ್ಲಿ ನೋಡಿದರಲ್ಲಿ ಸೈಕಲ ರಿಕ್ಷಾಗಳೇ ಕಾಣಿಸುತ್ತಿದ್ದವು. ಅವುಗಳನ್ನು ನೋಡುವುದು ಇಂದು ಅಪರೂಪ.
ಆಟೋಗಳ ಪ್ರವೇಶದಿಂದಾಗಿ ಸೈಕಲ್ ರಿಕ್ಷಾಗಳು ತಮ್ಮ ಅಸ್ಥಿತ್ವವನ್ನು ಕಳೆದುಕೊಂಡಿವೆ. ಕಲಬುರಗಿ ಮಹಾನಗರದಲ್ಲಿಂದು ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ.
ಕಲಬುರಗಿಯ ಸುಪರ ಮಾರುಕಟ್ಟೆಯ ಕಿರಾಣ ಬಜಾರ ಮತ್ತು ಎಂ.ಎಸ್.ಕೆ ಮಿಲ್ ಬಳಿಯ ಕಣ್ಣಿ ತರಕಾರಿ ಮಾರುಕಟ್ಟೆಯಲ್ಲಿ 8-10 ಸೈಕಲ್ ರಿಕ್ಷಾಗಳು ಕಾಣಸುತ್ತವೆ.
ಕಳೆದ ನಾಲ್ಕು-ಐದು ದಶಕಗಳಿಂದ ಸೈಕಲ ರಿಕ್ಷಾದೊಂದಿಗೆ ತಮ್ಮ ಬದುಕು ಕಟ್ಟಿಕೊಂಡಿರುವ ಹಳೆಯ ತಲೆಮಾರಿನ ವ್ಯಕ್ತಿಗಳ ಸರಾಸರಿ ದಿನದ ಆದಾಯ 100 ರಿಂದ 150 ರೂ.ಗಳು ಮಾತ್ರ.
ಮೂರುವರೆ ದಶಕದಿಂದ ಸೈಕಲ್ ರಿಕ್ಷಾವನ್ನೆ ತುಳಿಯುತ್ತಿರುವ ಬಿದ್ದಾಪುರ ಕಾಲೋನಿಯ ಭೀಮರಾಯ ಬಸವಕಲ್ಯಾಣ ಅವರು, ಹೇಳುವಂತೆ ಸಣ್ಣಪುಟ್ಟ ಕಟ್ಟಡ ಸಾಮಾಗ್ರಿಗಳು, ಕಿರಾಣಿಯ ಸಗಟು, ಹಮಾಲಿ ವಸ್ತುಗಳು ಮತ್ತು ತರಕಾರಿಗಳ ಸಗಟು ಸಾಗಿಸಲು ಕೆಲವೇ ಕೆಲವು ಜನರು ಸೈಕಲ್ ರಿಕ್ಷಾವನ್ನು ಬಳಕೆಮಾಡುತ್ತಾರೆ.
ಮಹಾನಗರದಲ್ಲಿಂದು ಸೈಕಲ್ ರೀಕ್ಷಾ ತುಳಿಯುವವರೆಲ್ಲರೂ ಹಿರಿಯ ನಾಗರಿಕರು ಸರಾಸರಿ 60 ರಿಂದ 70 ವಯೋಮಾನದವರು ಇವರಲ್ಲಿ ಬಹುತೇಕರಿಗೆ ಮಂಡಿನೋವು ಸಮಸ್ಯೆ ಇದ್ದು, ಸೈಕಲ್ ತುಳಿದುಕೊಂಡು ಸಗಟು ಸಾಗಿಸಲು ತುಂಬಾನೆ ಕಷ್ಟ. ಹೀಗಾಗಿ ಸಗಟು ತುಂಬಿದ ರಿಕ್ಷಾವನ್ನು ತಳ್ಳಿಕೊಂಡು ಹೋಗುತ್ತಾರೆ. ಅಲ್ಲಲ್ಲಿ ರಸ್ತೆಗಳಲ್ಲಿ ಇರುವ ಇಳಿಜಾರಿನÀಲ್ಲಿ ಮಾತ್ರ ರಿಕ್ಷಾ ಹತ್ತಿ ತುಳಿಯುತ್ತಾರೆ, ಸಗಟು ಸಾಮಗ್ರಿಗಳನ್ನು ಇಳಿಸಿದ ಮೇಲೆ ಖಾಲಿಯಾಗಿರುವ ಸೈಕಲ್ ರಿಕ್ಷಾಗಳನ್ನು ಯುವಕರು ನಾಚಿಸುವಂತೆ ಸರಾಗವಾಗಿ ತುಳಿದುಕೊಂಡು ವೇಗವಾಗಿ ನಡೆಸಿಕೊಂಡು ಹೋಗುತ್ತಾರೆ.
ತರಕಾರಿ ಮತ್ತು ಕಿರಾಣಿ ಸಗಟು ಸಾಗಿಸಲು ದಿನನಿತ್ಯ ಇವರಿಗೆ ಕೆಲವು ಖಾಯಂ ಗ್ರಾಹಕರು ಇರುವುದರಿಂದಾಗಿಯೇ ಹಳೆತಲೆಮಾರಿನ ಇವರ ಕಾಯಕ ಮುಂದುವರೆದಿರುವುದು ಪ್ರಮುಖ ಕಾರಣವೂ ಹೌದು.
ನಂಬಿಕೆ, ವಿಶ್ವಾಸ ಮತ್ತು ಮಾನವೀಯತೆಯ ಹಿನ್ನಲೆಯಲ್ಲಿ ಸೈಕಲ್ ರಿಕ್ಷಾವಾಲರಿಗೆ ತರಕಾರಿ ಮತ್ತು ಕಿರಾಣಿ ಸಗಟು ಸಾಗಿಸಲು ಅವಕಾಶ ನೀಡಲಾಗುತ್ತಿದೆ ಎಂಬ ವಾಸ್ತವ ಸತ್ಯವನ್ನು ಕಿರಾಣಿ ಅಂಗಡಿ ಮಾಲೀಕ ಶರಣಪ್ಪ ಹಾಗೂ ಶಾಬ್ದಿ ಅವರು ಹೇಳುತ್ತಾರೆ. ನಾಲ್ಕು-ಐದು ದಶಕಗಳಿಂದ ಈ ಸೇವೆಯಲ್ಲಿರುವ ಇವರನ್ನು ಬೀದಿಗೆ ತಳ್ಳುವುದು ಸರಿಯಲ್ಲ. ಈ ಒಂದು ತಲೆಮಾರಿಗೆ ಅವಕಾಶ ನೀಡಲು ನಮ್ಮ ಹಿರಿಯರು ಹೇಳಿದ್ದರಿಂದಾಗಿ ಸೈಕಲ್ ರಿಕ್ಷಾಗಳÀ ಮೂಲಕವೇ ಸಣ್ಣಪುಟ್ಟ ಸಾಮಗ್ರಿಗಳನ್ನು ಗೊಡಾನಿಂದ ಅಂಗಡಿಗೆ ಸಾಗಿಸಲಾಗುತ್ತದೆ ಅಂತ ಹೇಳುತ್ತಾರೆ ಅವರು.
ತಮ್ಮ ಇಳಿವಯಸ್ಸಿನಲ್ಲಿಯೂ ದುಡಿದು ತಿನ್ನುವ ಅವರ ಆತ್ಮಗೌರವವನ್ನು ಮೆಚ್ಚಲೇ ಬೇಕು ಎನ್ನುವ ತರಕಾರಿ ಮಾರಾಟಗಾರರಾದ ಬಂಗಾರಮ್ಮ, ಮಲ್ಲಮ್ಮ ಮತ್ತು ಶಿವಶರಣಪ್ಪ, ಖಾಜಾ ಬಾಬಹುಸೇನ ಅವರು, ಅಳಿದು ಉಳಿದಿರುವ ಹಳೆಯ ತಲೆಮಾರಿನ ಈ ಹಿರಿಯ ಸೈಕಲ್ ರಿಕ್ಷಾವಾಲರಿಗೆ ತರಕಾರಿ ಸಾಗಿಸಲು ಬಾಡಿಗೆಯ ಹಣ ನೀಡುತ್ತೇವೆ. ನಮ್ಮ ತರಕಾರಿಗಳನ್ನು ಆಟೋಗಳಲ್ಲಿ ಸಾಗಿಸಬಹುದು. ಆದರೂ ಇವರ ಉದ್ಯೋಗಕ್ಕೆ ಕತ್ತರಿ ಹಾಕಲು ಮನಸ್ಸು ಒಪ್ಪುವುದಿಲ್ಲ ಎಂಬ ತಮ್ಮ ಮಾನವೀಯ ನುಡಿಗಳು ಅವರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ ಎಂದರೆ ತಪ್ಪಾಗಲಾರದು.
ಕಳೆದ ಮೂರು ನಾಲ್ಕು ವರ್ಷಗಳಲ್ಲಿ 30-40ಕ್ಕೆ ಇದ್ದ ಇವರ ಸಂಖ್ಯೆ 20-25ಕ್ಕೆ ಕುಸಿದಿದೆ. ಮಹಾಮಾರಿ ಕೊರೊನಾ ಲಾಕ್‍ಡೌನ ಸಂದರ್ಭದಲ್ಲಿ ಇವರ ಸಂಕಷ್ಟ ಹೇಳಲಾಗದು. ಕೆಲವರು ವಯೋಸಹಜ ರೋಗಗಳಿಂದ ತೀರಿಕೊಂಡಿದ್ದಾರೆ. ಉಳಿದಿರುವವರಲ್ಲಿ ಶಕ್ತಿ ಇರುವವರೆಗೂ ಅವರಿಗೆ ಸಗಟು ಸಾಗಿಸುವ ಕಾಯಕ ನೀಡಬೇಕು ಎಂಬ ತಮ್ಮ ಅಭಿಲಾಷೆ ಕೇವಲ ಮಾನವೀಯ ದೃಷ್ಟಿಯಾಗಿದೆ.
ತಮ್ಮ ಹಳೆಯ ನೆನಪನ್ನು ಹೊರ ಹಾಕಿದ ಬೀಮರಾಯ ಅವರು, ಸೈಕಲ್ ರಿಕ್ಷಾ ಸವಾರಿ ಅಪ್ಪನ ಗುಡಿಯಿಂದ ಸುಪರ ಮಾರುಕಟ್ಟೆಗೆ ರೂ.1. ಅಂದು ರಿಕ್ಷಾಗಳು ಬಾಡಿಗೆಗೆ ಸಿಗುತ್ತಿದ್ದವು. ಅವುಗಳನ್ನು ನಿರುದ್ಯೋಗಿ ಯುವಕರಾಗಿದ್ದ ನಾವು ದಿನದ ಬಾಡಿಗೆ ನೀಡಿ ಸೈಕಲ್ ರಿಕ್ಷಾ ಪಡೆದುಕೊಂಡು ಸಗಟು, ಪ್ರಯಾಣಿಕರನ್ನು, ಸಾಗಿಸಿ ಆದಾಯ ಮಾಡಿಕೊಂಡು ಮನೆಗೆ ಹೋಗುತ್ತಿದ್ದೆವು. ಕೆಲವರು ಸಾಲಮಾಡಿ ಸೈಕಲ್ ರಿಕ್ಷಾವನ್ನು ಖರೀದಿಸಿ ಶಾಲಾ ಮಕ್ಕಳನ್ನು ಶಾಲೆಗೆ ಬಿಟ್ಟು ಮತ್ತು ಕರೆ ತರಲು ತಿಂಗಳ ಬಾಡಿಗೆ ಆದಾರದ ಮೇಲೆ ಕೂಲಿ ಪಡೆಯುತ್ತಿದ್ದರು ಎಂದು ತಮ್ಮ ಹಳೆಯ ನೆನಪನ್ನು ಹಂಚಿಕೊಂಡರು.