ಅಸ್ತಿತ್ವಕ್ಕೆ ಬಾರದ ನಗರಸಭೆ ಆಡಳಿತ ಮಂಡಳಿ: ಅಭಿವೃದ್ಧಿ ಕುಂಠಿತ

ಅರಸೀಕೆರೆ, ನ. ೧- ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯೊಂದಿಗೆ ಜನರ ಸೇವೆಗೆ ಅಣಿಯಾಗಬೇಕಿದ್ದ ನಗರಸಭೆ ಜೆಡಿಎಸ್ ಮತ್ತು ಬಿಜೆಪಿ ನಾಯಕರ ವಿಭಿನ್ನ ನಡೆಯಿಂದಾಗಿ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.
ನಗರಸಭೆಗೆ ೩೧ ಸದಸ್ಯರ ಬಲವಿದ್ದು ಈ ಪೈಕಿ ಜೆಡಿಎಸ್‌ನಿಂದ ೨೧ ಮಂದಿ ಆಯ್ಕೆಯಾದರೆ ಬಿಜೆಪಿಯಿಂದ ಐವರು, ಕಾಂಗ್ರೆಸ್‌ನಿಂದ ಓರ್ವ ಹಾಗೂ ಪಕ್ಷೇತರವಾಗಿ ಮೂವರು ಗೆದ್ದು ನಗರಸಭೆ ಪ್ರವೇಶಿಸಿ ಬರೋಬ್ಬರಿ ೨೬ ತಿಂಗಳು ಕಳೆದರೂ ಆಳಿದ ಸರ್ಕಾರಗಳ ನಿರ್ಲಕ್ಷ್ಯವೋ ಅಥವಾ ಮತ್ತೇನು ಕಾರಣವೋ ನಗರಸಭೆಯಲ್ಲಿ ಚುನಾಯಿತ ಬಾಡಿ ಅಸ್ತಿತ್ವದಲ್ಲಿ ಇಲ್ಲದ ಕಾರಣ ನಗರದ ಅಭಿವೃದ್ಧಿಗೆ ಹಿನ್ನೆಡೆ ಆಗಿರುವುದಂತೂ ಸುಳ್ಳಲ್ಲ.
ಅಂತೂ ಇಂತೂ ಅರಸೀಕೆರೆ ನಗರಸಭೆ ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಸರ್ಕಾರ ಮುಂದಾಯಿತಾದರೂ ಪ್ರಕಟಿಸಿದ ಮೀಸಲಾತಿಯಲ್ಲಿ ಸರ್ಕಾರದ ಹಸ್ತಕ್ಷೇಪ ಎದ್ದು ಕಾಣುತ್ತಿದೆ. ಮೀಸಲಾತಿ ಹಂಚಿಕೆ ಸಮರ್ಪಕವಾಗಿ ಆಗಿಲ್ಲವೆಂದು ಅಲ್ಲಲ್ಲಿ ಅಸಮಾಧಾನದ ಕೂಗು ಸಹ ಕೇಳಿ ಬರುವ ಜತೆಗೆ ಈ ಸಂಬಂಧ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ವರೆಗೂ ದೂರು ಸಲ್ಲಿಕೆ ಆಗಿದ್ದರಿಂದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗಳು ಸ್ಥಳೀಯವಾಗಿ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು ಇದಕ್ಕೆ ಅರಸೀಕೆರೆ ನಗರಸಭೆ ಹೊರತಾಗಿಲ್ಲ.
ಈ ನಡುವೆ ಇಲ್ಲಿನ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಪಡಿಸಿದ್ದರಿಂದ ಚುನಾವಣಾ ಪ್ರಕ್ರಿಯೆ ಕೂಡ ನಡೆಯಿತು. ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ್ದ ಜಿಲ್ಲಾ ಉಪ ವಿಭಾಗಾಧಿಕಾರಿಗಳಾದ ಜಗದೀಶ್ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಬಿಜೆಪಿಯ ಗಿರೀಶ್ ಅವರು ಸಲ್ಲಿಸಿದ ನಾಮಪತ್ರ ಸೇರಿದಂತೆ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಬಿಜೆಪಿ ವತಿಯಿಂದ ಗೀತಾ ಹೇಮಂತ್ ಮತ್ತು ಜೆಡಿಎಸ್‌ನಿಂದ ಕಾಂತದರ್ಶನ್ ಹಾಗೂ ಪುಟ್ಟಸ್ವಾಮಿ ಎಂಬುವವರು ಸಲ್ಲಿಸಿದ ನಾಮಪತ್ರಗಳನ್ನು ಸ್ವೀಕರಿಸಿದರು.
ಕಳೆದ ೨ ವರ್ಷಗಳಿಂದ ನಗರಸಭೆಗೆ ಹಿಡಿದಿದ್ದ ಗ್ರಹಣ ಮುಕ್ತಾಯವಾಯ್ತು ಎನ್ನುವಷ್ಟರಲ್ಲಿ ಜೆಡಿಎಸ್ ಸದಸ್ಯರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದ ಕಾರಣ ಕೋರಂ ಕೊರತೆಯಿಂದಾಗಿ ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ನ.೨ರಂದು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸುವುದಾಗಿ ಚುನಾವಣಾಧಿಕಾರಿ ಜಗದೀಶ್ ಘೋಷಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಕಾಂತ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು.