ಅಸುನೀಗಿದ ರೈತರ ಸ್ಮರಣಾರ್ಥ ಟ್ರ್ಯಾಕ್ಟರ್ ಜಾಥಾ

ಧಾರವಾಡ ಜ.9- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ರೈತರು ದೆಹಲಿಯಲ್ಲಿ ಹಮ್ಮಿಕೊಂಡ ಪ್ರತಿಭಟನೆ ಸಂದರ್ಭದಲ್ಲಿ ಅಸುನೀಗಿದ 60 ರೈತರ ಸ್ಮರಣಾರ್ಥ ಧಾರವಾಡದಲ್ಲಿಂದು ರೈತ ಹಿತರಕ್ಷಣಾ ಪರಿವಾರದ ವತಿಯಿಂದ ಟ್ರ್ಯಾಕ್ಟರ್ ಜಾಥಾ ಹಮ್ಮಿಕೊಳ್ಳಲಾಯಿತು.
ಟ್ರ್ಯಾಕ್ಟರ್ ಜಾಥಾವು ನಗರದ ಕಡಪಾ ಮೈದಾನದಿಂದ ಆರಂಭವಾಗಿ ನಗರದ ಸುಭಾಶ ರಸ್ತೆ, ಆನಂದರಾವ್ ಸರ್ಕಲ್, ಅಂಜುಮನ್ ಸರ್ಕಲ್, ಆಝಾದ ರಸ್ತೆ ಮೂಲಕ ಮರಳಿ ಕಡಪಾ ಮೈದಾನಕ್ಕೆ ಆಗಮಿಸಿತು.
ಜಾಥಾ ನೇತೃತ್ವವನ್ನು ಮಾಜಿ ಸಚಿವ ಬಾಬಾಗೌಡ ಪಾಟೀಲ ಮತ್ತು ಮಾಧ್ಯಮ ವಿಶ್ಲೇಶಕ ಪಿ.ಎಚ್.ನೀರಲಕೇರಿ ವಹಿಸಿದ್ದರು. ವಿವಿಧ ರೈತ ಸಂಘಟನೆಯ ಕಾರ್ಯಕರ್ತರು ನೂರಾರು ಟ್ರ್ಯಾಕ್ಟರಗಳನ್ನು ತಂದು ಜಾಥಾದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಾಬಾಗೌಡ ಪಾಟೀಲ, ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಹಾಗೂ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಖಾತ್ರಿ ನೀಡಬೇಕು. ಅಲ್ಲದೇ ಕೇಂದ್ರ ಸರ್ಕಾರದ ಮುಂದೆ ರೈತ ಸಂಘಟನೆಗಳು ಮುಂದಿಟ್ಟ ಎಲ್ಲ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು. ರೈತರು ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೆಯುವ ಛಳಿ ಹಾಗೂ ಮಳೆಯಲ್ಲಿ ನ್ಯಾಯಕ್ಕಾಗಿ ಕೇಂದ್ರಕ್ಕೆ ಮೊರೆ ಹೋಗಿದ್ದಾರೆ. ದೇಶದ ಬೆನ್ನಲುಬಾದ ರೈತರ ಹಿತರಕ್ಷಣೆಗಾಗಿ ಎಲ್ಲ ಕಾನೂನಾತ್ಮಕ ಬೇಡಿಕೆಗಳನ್ನು ಕೇಂದ್ರ ಶೀಘ್ರದಲ್ಲಿ ಈಡೇರಿಸಬೇಕೆಂದು ಬಾಬಾಗೌಡ ಆಗ್ರಹಿಸಿದರು.