ಅಸಾಂಪ್ರದಾಯಿಕ ಇಂಧನ ಬಳಕೆ ಹೆಚ್ಚಬೇಕು : ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ ಜು.31; ವಿದ್ಯುತ್ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡಿ, ಅಸಾಂಪ್ರದಾಯಿಕ ಇಂಧನದ ಬಳಕೆಯನ್ನು ಹೆಚ್ಚಿಸಬೇಕಿದೆ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹೇಳಿದರು.ಜಿಲ್ಲಾಡಳಿತ, ಇಂಧನ ಇಲಾಖೆ ಹಾಗೂ ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿ ನಿಯಮಿತ ಶಿವಮೊಗ್ಗ ವೃತ್ತ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಉಜ್ವಲ ಭಾರತ, ಉಜ್ವಲ ಭವಿಷ್ಯ ಘೋಷಣೆಯಡಿ ವಿದ್ಯುತ್ @ 2047 ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಡಿದರು.ವಿದ್ಯುತ್ ನಮ್ಮ ಬಾಳಿನಲ್ಲಿ ಬದಲಾವಣೆ ತಂದಿದೆ. ವಿದ್ಯುತ್ ಒಂದು ದೊಡ್ಡ ಜಾಲ, ಗ್ರಾಹಕರಿಗೆ ಉತ್ತಮ ವಿದ್ಯುತ್ ಸೇವೆ ನೀಡಲು ಅಧಿಕಾರಿ/ಸಿಬ್ಬಂದಿಗಳು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ವಿಶೇಷವಾಗಿ ಲೈನ್‍ಮನ್‍ಗಳು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ.
     ಹಿಂದೆ ನಮ್ಮ ಊರಿಗೆ ಮೊದಲ ಬಾರಿಗೆ ವಿದ್ಯುತ್ ದೀಪ ಬಂದಾಗ ಎಣ್ಣೆ ಇಲ್ಲದ ದೀಪ ಹೇಗಿರುತ್ತದೆಂದು ಕುತೂಹಲದಿಂದ ನೋಡುತ್ತಿದ್ದೆವು. ಆ ನಂತರ ವಿದ್ಯುತ್ ಜಾಲ ದೊಡ್ಡದಾಗಿ ಬೆಳೆದು ಈಗ ಶೇ.100 ವಿದ್ಯುದೀಕರಣಕ್ಕೆ ಬಂದು ತಲುಪಿರುವುದು ಒಳ್ಳೆಯ ಬೆಳವಣಿಗೆ.ಅಸಾಂಪ್ರದಾಯಿಕ ಇಂಧನವನ್ನು ನಾವು ಹೆಚ್ಚಿಸಬೇಕಿದೆ. ಈಗಾಗಲೇ ವಿದ್ಯುತ್ ಚಾಲಿನ ವಾಹನಗಳು ಬಂದಿವೆ. ಇನ್ನು 10 ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್‍ನಿಂದ ಓಡುವ ವಾಹನಗಳು ಕಡಿಮೆ ಆಗಲಿವೆ. ರೈಲ್ವೆಯಲ್ಲಿ ಸಹ ವಿದ್ಯುತ್ ಬಳಕೆ ಹೊಸ ಬದಲಾವಣೆ ತಂದಿದೆ. ದೇಶದ ಆರ್ಥಿಕ ಪ್ರಗತಿಗೆ ಸಹ ಇದು ಕೊಡುಗೆ ನೀಡುತ್ತಿದ್ದು, ದೇಶದ ಭವಿಷ್ಯ ಉಜ್ವಲವಾಗಿ ನಿರ್ಮಾಣ ಮಾಡುವಲ್ಲಿ ಪೂರ್ಣ ಪ್ರಮಾಣದ ಕೆಲಸವನ್ನು ಸರ್ಕಾರ ಮಾಡುತ್ತಿರುವುದು ಅಭಿನಂದನೀಯ ಎಂದರು.