ಅಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ಶುಶ್ರೂಷಕರ ಪಾತ್ರ ಶ್ಲಾಘನೀಯ : ತಹಶೀಲ್ದಾರ್


ದಾವಣಗೆರೆ ನ.೨೧; ಮಧುಮೇಹದಂತಹ ಅಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ಅವಿರತ ಶ್ರಮಿಸುತ್ತಿರುವ ಶುಶ್ರೂಷಕರು ಮತ್ತು ಆರೋಗ್ಯ ಸಿಬ್ಬಂದಿಗಳ ಪಾತ್ರ ಶ್ಲಾಘನೀಯವಾಗಿದ್ದು ಈ ನಿಟ್ಟಿನಲ್ಲಿ ನಮ್ಮ ಇಲಾಖೆಯಿಂದ ಎಲ್ಲಾ ಸಲಹೆ ಸಹಕಾರಗಳನ್ನು ನೀಡಲಾಗುವುದು ಎಂದು ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಬಿ.ಎನ್. ಗಿರೀಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ, ತಾಲ್ಲೂಕು ಆಡಳಿತ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ತಹಶೀಲ್ದಾರರ ಕಛೇರಿಯ ಸಭಾಂಗಣದಲಿ ಏರ್ಪಡಿಸಲಾಗಿದ್ದ ವಿಶ್ವ ಮಧುಮೇಹ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಗವಾಗಿ ಅಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಅವಿರತವಾಗಿ ಹಗಲಿರುಳು ಶ್ರಮಿಸಿದ ಶುಶ್ರೂಷಕರ ಸೇವೆಗಾಗಿ ತಾಲ್ಲೂಕು ಮಟ್ಟದ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿ ಮಾತನಾಡಿದರು.
ಇತ್ತೀಚಿಗೆ ಮಕ್ಕಳಲ್ಲೂ ಮಧುಮೇಹ ಕಾಣ ಸಿಕೊಳ್ಳುತ್ತಿದ್ದು ಅವರ ಆಹಾರದ ಬಗ್ಗೆ ತಿಳಿಹೇಳಬೇಕಾಗುತ್ತದೆ. ವಾರದಲ್ಲಿ ಒಂದು ದಿವಸ ಮಧುಮೇಹದ ಬಗ್ಗೆ ಅರಿವು ಮೂಡಿಸುವ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಆಹಾರ, ಜೀವನವಿಧಾನ ಕ್ರಮದಲ್ಲಿ ಬದಲಾವಣೆ ತರಲು ಪ್ರೋತ್ಸಾಹಿಸಬೇಕು ಎಂದ ಅವರು ಅಗತ್ಯ ಸಲಕರಣೆಗಳನ್ನು ಸಂಬಂಧಪಟ್ಟವರಿಗೆ ಪೊರೈಸುವುದಾಗಿ ಭರವಸೆ ನೀಡಿದರು ಹಾಗೂ ಶುಶ್ರೂಷಕಿ ಹಾಗೂ ಕಿ.ಮ.ಆ.ಸ ವೇತನ ತಾರತಮ್ಯ ಇರುವುದರಿಂದ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ದಾವಣಗೆರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ||ವೆಂಕಟೇಶ್.ಎಲ್.ಡಿ. ಪ್ರಾಸ್ತಾವಿಕವಾಗಿ ಮಾತನಾಡಿ, ಕೋವಿಡ್-೧೯ ಸಾಂಕ್ರಾಮಿಕ ರೋಗಕ್ಕೆ ಅತೀ ಬೇಗನೆ ಒಳಗಾಗುವವರಲ್ಲಿ ಅತೀ ಮುಖ್ಯವಾಗಿ ಮಧುಮೇಹ ರೋಗಿಗಳು ಒಬ್ಬರು. ಈ ರೋಗಿಗಳನ್ನು ಈ ಸಮಯದಲ್ಲಿ ಅತೀ ಜಾಗೃತಿಯಿಂದ ನೋಡಿಕೊಳ್ಳಬೇಕಾಗುತ್ತದೆ. ಹಾಗೂ ಜನ ಸಮುದಾಯದಲ್ಲಿ ಅತೀ ಮುಖ್ಯವಾಗಿ ಜಾಗೃತಿ ಮೂಡಿಸಬೇಕಿದೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಹೆಚ್ಚಾಗಿ ಹಸಿವಾಗುವುದು, ಬಾಯಾರಿಕೆ ಆಗುವುದು, ತೂಕ ಇಳಿಕೆ ಆಗುವುದು, ಅಧಿಕ ಮೂತ್ರ ವಿಸರ್ಜನೆ, ತೀವ್ರ ಆಯಾಸ, ಬೇಗನೆ ವಾಸಿಯಾಗದ ಗಾಯಗಳು ಈ ಲಕ್ಷಣಗಳು ಲಿಂಗ ಬೇಧವಿಲ್ಲದೇ ಬರುತ್ತದೆ. ವಂಶಪಾರಂಪರ್ಯವಾಗಿಯೂ ಸಹ ಇದು ಬರುತ್ತದೆ. ಆದುದರಿಂದ ನಾವುಗಳೆಲ್ಲರೂ ಹೆಚ್ಚಿನ ಶ್ರಮವಹಿಸಿ ಕರ್ತವ್ಯ ನಿರ್ವಹಿಬೇಕೆಂದ ಅವರು ಈ ವರ್ಷದ ಘೋಷಣೆಯಾದ ಶುಶೂಷಕರು ಮಧುಮೇಹದ ಆರೈಕೆಯಲ್ಲಿ ಬದಲಾವಣೆ ತರಬಲ್ಲರು ಎಂಬುದಾಗಿದ್ದು ಇದನ್ನು ಶುಶ್ರೂಷಕರು ಪರಿಣಾಮಕಾರಿ ಮಾಡಬಲ್ಲರು ಎಂದು ತಿಳಿಸಿದರು.
ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಉಮಾಪತಿ, ತಾಲ್ಲೂಕು ಹಿರಿಯ ಪರುಷ ಆರೋಗ್ಯ ಸಹಾಕ ವೆಂಕಟಾಚಲ ಕುಮಾರ, ಹಾಗೂ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಶುಶ್ರೂಷಕಿಯರು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಸಿಬ್ಬಂದಿ ವರ್ಗದವರು, ಆಶಾ ಮೇಲ್ವಿಚಾರಕಿ ಸುರೇಖಾ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ರವಿ.ಪಿ.ವಿ ಇದ್ದರು.