ಅಸಹಾಯಕರಿಗೆ ನೆರವು ನೀಡುವುದೇ ಧರ್ಮ: ಗುರುಕುಲಶ್ರೀ

ತಿಪಟೂರು, ನ. ೬- ಎಲ್ಲಾ ಮತ, ಧರ್ಮ, ಜಾತಿ, ಜನಾಂಗಗಳನ್ನು ಪ್ರೀತಿಸುವ ಹಾಗೂ ಎಲ್ಲರಿಗೂ ಸದೃಢವಾದ ಸಾಮಾಜಿಕ ವ್ಯವಸ್ಥೆಯನ್ನು ಕಲ್ಪಿಸುವ ಹಕ್ಕನ್ನು ನಮ್ಮ ಸಂವಿಧಾನ ಕೊಟ್ಟಿದೆ ಎಂದು ಗುರುಕುಲಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಕರಿಬಸವದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಗುರುಕುಲಾನಂದಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಹೊಸ ಹುರುಪಿನೊಂದಿಗೆ ಉದಯವಾಗಿರುವ ನೂತನ ಜಯಕರ್ನಾಟಕ ಜನಪರ ವೇದಿಕೆಯ ಲಾಂಛನವಿರುವ ಬಾವುಟ ಮತ್ತು ಶಲ್ಯಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ನಮ್ಮ ರಾಷ್ಟ್ರ ಎಲ್ಲಾ ಧರ್ಮಗಳನ್ನು ಗೌರವಿಸುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಎಲ್ಲರನ್ನೂ ಸಹೋದರರಂತೆ ಕಾಣುವ ದೇಶವಾಗಿದೆ. ಪ್ರಪಂಚದ ಪ್ರಮುಖ ಧರ್ಮಗಳಾದ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಧರ್ಮಗಳ ಸಾರ ಮಾನವ ಧರ್ಮವನ್ನು ಸಾರುವುದೇ ಆಗಿದೆ ಎಂದ ಅವರು, ಯಾವ ಧರ್ಮಗಳು ಯಾರಿಗೂ ಕೆಡುಕನ್ನು ಬಯಸುವುದಿಲ್ಲ ಮನುಷ್ಯನಾದವನು ಯಾವುದನ್ನು, ಯಾರನ್ನೂ ಕನಿಷ್ಠವಾಗಿ ನೋಡಬಾರದು. ಎಲ್ಲ ಧರ್ಮದ ಸಂತರ ಅಂದರೆ ಕಬೀರ್, ಶಿಶುನಾಳ ಶರೀಫ್, ಮಹಮದ್ ಪೈಗಂಬರ್, ಯೇಸು, ಹಿಂದೂ ದೇವಾನು ದೇವತೆಗಳೂ ಅಸಹಾಯಕರಿಗೆ ನೆರವನ್ನು ನೀಡುವಂತೆ ಸಂದೇಶವನ್ನು ನೀಡಿದ್ದಾರೆ. ಮನುಷ್ಯನಾದವನು ನಮ್ಮ ಧರ್ಮ ಶ್ರೇಷ್ಠ ಇತರ ಧರ್ಮ ಕನಿಷ್ಠವೆಂಬ ಮನೋಧರ್ಮವನ್ನು ಬಿಟ್ಟು ಎಲ್ಲರೂ ಮತ್ತು ಎಲ್ಲಾ ಧರ್ಮಗಳು ಸರಿಸಮಾನವೆಂದು ಅರಿತುಕೊಂಡು ಒಟ್ಟಾಗಿ ನಡೆಯಬೇಕು ಎಂದರು.
ನೂತನವಾಗಿ ಉದಯವಾಗಿರುವ ಈ ವೇದಿಕೆಯು ಸಮಾಜದ ಅಭಿವೃದ್ಧಿಗೆ ಹಾಗೂ ಅಶಕ್ತರಿಗೆ ಧರ್ಮದ ಮೂಲಕ ನ್ಯಾಯ, ಸಹಾಯ ಮಾಡುತ್ತಾ, ನಾಡಿನ ನೆಲ, ಜಲ, ನಾಡು, ನುಡಿ, ಭಾಷೆಗೆ ಧಕ್ಕೆ ಬಂದರೆ ದ್ವನಿ ಎತ್ತುವ ವೇದಿಕೆಯಾಗಿ ಕಾರ್ಯನಿರ್ವಹಿಸಬೇಕೆಂದು ಕಿವಿ ಮಾತು ಹೇಳಿದರು. ಅಮಾನ್-ಇ-ಇಸ್ಲಾಂ ಸುನ್ನಿ ಮುಸ್ಲಿಂ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಮಹಮದ್ ಗೌಸ್ ಮಾತನಾಡಿ, ಹಿಂದೂ, ಮುಸ್ಲಿಂ ಎನ್ನದೆ ಸಮಾಜದಲ್ಲಿ ಎಲ್ಲರೂ ಒಂದುಗೂಡಿಕೊಂಡು ಮುನ್ನೆಡೆದರೆ ಯಾವ ಜನಾಂಗೀಯ ಸಂಘರ್ಷಗಳಿಗೆ ಜಾಗವಿರುವುದಿಲ್ಲ. ಮನುಷ್ಯನಾದವನು ಅದನ್ನು ಅರಿತುಕೊಂಡು ಮುನ್ನೆಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಬಿ.ಟಿ. ಕುಮಾರ್, ನೌಕರ ಘಟಕದ ಡಾ. ಎಲ್.ಎಂ. ವೆಂಕಟೇಶ್, ದುದನ್‌ಕರ್, ಅಲ್ಪಸಂಖ್ಯಾತರ ಘಟಕದ ಶಾಹಿದ್, ಲೋಕೇಶ್, ಡಾ. ಭಾಸ್ಕರ್, ಅಮ್ಜದ್, ಸೈಪುಲ್ಲಾ, ಖಲಂದರ್, ಶ್ರೀಮಠದ ರವಿಶಂಕರ್, ಧರ್ಮೇಂದ್ರಪ್ಪ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಮತ್ತು ಅಲ್ಪಸಂಖ್ಯಾತ ಮುಖಂಡರು ಉಪಸ್ಥಿತರಿದ್ದರು.