ಅಸಮಾನತೆ ಹೋಗಲಾಡಿವುದೇ ಸಾಮಾಜಿಕ ನ್ಯಾಯದ ಗುರಿ: ಮಹಾವೀರ

ಸಂಜೆವಾಣಿ ವಾರ್ತೆ

ದಾವಣಗೆರೆ.ಮೇ.೨೮: ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಡಿಯಲ್ಲಿ ಹಲವಾರು ಕಾನೂನುಗಳನ್ನು ಜಾರಿ ಮಾಡಲಾಗಿದ್ದು, ಸಾಮಾಜಿಕ ಅಸಮಾನತೆ ಹೋಗಲಾಡಿಸುವುದೇ ಸಾಮಾಜಿಕ ನ್ಯಾಯದ ಗುರಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ ಮ.ಕರೆಣ್ಣನವರ ಹೇಳಿದರು.ನಗರದ ವನಿತಾ ಸಮಾಜದಲ್ಲಿ ಆಕ್ಷನ್ ಇನ್ಷಿಯೇಟಿವ್ ಫಾರ್ ಡೆವಲಪ್‌ಮೆಂಟ್ ದಾವಣಗೆರೆ, ಜಿಲ್ಲಾ ಕಾನೂನು ಪ್ರಾಧಿಕಾರ ವತಿಯಿಂದ ರ‍್ರೆ ಡೆಸ್ ಹೋಮ್ಸ್ ಸಹಕಾರದೊಂದಿಗೆ ಯುವಕ ಯುವತಿಯರಿಗೆ ಸಾಮಾಜಿಕ ನ್ಯಾಯ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನೂರಾರು ವರ್ಷಗಳ ಹಿಂದಿನಿಂದ ಶೋಷಣೆ ಮಾಡುವಂತದ್ದು, ಇನ್ನೊಬ್ಬರನ್ನು ಅಸಹ್ಯ ಮಾಡುವಂತದ್ದು, ಇನ್ನೊಬ್ಬರ ಅವಕಾಶಗಳನ್ನು ಕಿತ್ತು ಕೊಳ್ಳುವಂತದ್ದು ಬಂದಿತ್ತು, ಆಗ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುಲು ಸ್ವಾತಂತ್ರö್ಯ ಸಂಗ್ರಾಮ ಆರಂಭವಾಯಿತು. ಸ್ವಾತಂತ್ರö್ಯದ ಹೋರಾಟದಲ್ಲಿ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕ ನಂತರ ದೇಶದ ಎಲ್ಲಾ ಜನರಿಗೂ ಅನುಕೂಲವಾಗಲೆಂದು ನಾವು ಸಂವಿಧಾನವನ್ನು ಅಳವಡಿಸಿಕೊಂಡೆವು ಆಗ ದೇಶದಲ್ಲಿ ಸಾಮಾಜಿಕ ನ್ಯಾಯ ಮುನ್ನೆಲೆಗೆ ಬಂದಿತು ಎಂದು ಹೇಳಿದರು.ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳೇ ಸಾಮಾಜಿಕ ನ್ಯಾಯದ ಮೂಲ ತತ್ವಗಳು ಮೂಲ ಆಧಾರಗಳು. ಒಬ್ಬ ವ್ಯಕ್ತಿಗೆ ಸಿಗಬೇಕಾದ ಗೌರವ ಸಿಗಬೇಕು, ಜಾತಿ ತಾರತಮ್ಯ, ಲಿಂಗ ತಾರತಮ್ಯ ಆಗಬಾರದು. ಇವೆಲ್ಲವನ್ನು ನಾವು ಮಾಡಿದರೇ ನಾವು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಂತಾಗುತ್ತದೆ ಎಂದು ನುಡಿದರು.