
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೨:ಮುಂಬರುವ ಲೋಕಸಭಾ ಚುನಾವಣೆ ನಮ್ಮೆಲ್ಲರಿಗೂ ಮಹತ್ವದ್ದು, ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲೇಬೇಕು. ಹಾಗಾಗಿ,ಅಸಮಾಧಾನ, ಅತೃಪ್ತಿಗಳನ್ನೆಲ್ಲ ಬದಿಗಿಟ್ಟು, ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಈಗಿನಿಂದಲೇ ಚಿತ್ತ ಹರಿಸಿ ಎಂದು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ದೆಹಲಿಯಲ್ಲಿಂದು ಮುಂದಿನ ಲೋಕಸಭಾ ಚುನಾವಣೆಯ ಸಿದ್ಧತೆ, ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆಗೆ ಸಮಿತಿ ರಚನೆ, ಶಾಸಕರ ಅಹವಾಲುಗಳಿಗೆ ಸ್ಪಂದನೆ, ಪಕ್ಷದಲ್ಲಿನ ಆಂತರಿಕ ಬೇಗುದಿಗೆ ಪರಿಹಾರ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಸಚಿವರು ಹಾಗೂ ಆಯ್ದ ಪ್ರಮುಖ ನಾಯಕರುಗಳ ಜತೆ ಹೈ ವೋಲ್ಟೇಜ್ ಸಭೆ ನಡೆಸಿದ್ದು, ಈ ಸಭೆಯಲ್ಲಿ ಅಸಮಾಧಾನ, ಮುನಿಸುಗಳನ್ನು ಬದಿಗಿಟ್ಟು ಲೋಕಸಭಾ ಚುನಾವಣೆಯ ಗೆಲುವಿಗೆ ಶ್ರಮಿಸುವಂತೆ ವರಿಷ್ಠರು ರಾಜ್ಯ ನಾಯಕರಿಗೆ ತಾಕೀತು ಮಾಡಿದ್ದಾರೆ.ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿವೆ. ಸರ್ಕಾರ ಬಂದು ೨ ತಿಂಗಳಷ್ಟೇ ಆಗಿದೆ ಹೀಗಿರುವಾಗ ಅಸಮಾಧಾನಗಳು ಸ್ಫೋಟಗೊಳ್ಳದಂತೆ ಎಚ್ಚರ ವಹಿಸಿ ಲೋಕಸಭಾ ಚುನಾವಣೆಯ ಗೆಲುವಿನತ್ತ ಎಲ್ಲರೂ ಚಿತ್ತ ಹರಿಸಬೇಕು. ಪಕ್ಷದ ಹಿತ ಮುಖ್ಯ. ಪಕ್ಷಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧರಾಗಿ ಎಂಬ ಸಂದೇಶವನ್ನು ಈ ಸಭೆಯಲ್ಲಿ ವರಿಷ್ಠರು ನೀಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಗೆಲುವು ಕಾಂಗ್ರೆಸ್ ಪಕ್ಷದಲ್ಲಿ ನವ ಚೈತನ್ಯ ಹಾಗೂ ಶಕ್ತಿ ತುಂಬಿದೆ. ಇದನ್ನು ಮುಂದುವರೆಸಿಕೊಂಡು ಲೋಕಸಭಾ
ಚುನಾವಣೆಯಲ್ಲೂ ಹೆಚ್ಚಿನ ಸ್ಥಾನ ಗೆಲ್ಲಬೇಕಿದೆ. ಹಾಗಾಗಿ, ಗ್ಯಾರಂಟಿ ಯೋಜನೆಗಳ ಲಾಭ ಜನರಿಗೆ ತಲುಪಿಸಿ ಆ ಮೂಲಕ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ಸಿಗುವಂತೆ ನೋಡಿಕೊಳ್ಳಿ. ಪ್ರತಿಷ್ಠೆ, ಅಹಂಗಳನ್ನು ಬಿಟ್ಟು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿ ಎಂದು ವರಿಷ್ಠರು ಈ ಸಭೆಯಲ್ಲಿಹೇಳಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೨ ತಿಂಗಳಾಗಿರುವಾಗಲೇ ಪಕ್ಷದಲ್ಲಿ ಮೂಡಿರುವ ಆಂತರಿಕ ಬೇಗುದಿ, ಶಾಸಕರ ಅಸಮಾಧಾನ ಎಲ್ಲದಕ್ಕೂ ಪರಿಹಾರ ಕಂಡುಕೊಂಡು ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಂಡು ಕೆಲ ಸಚಿವರುಗಳಿಗೆ ಚುನಾವಣೆಯ ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸುವ ಸಂಬಂಧವೂ ಈ ಸಭೆಯಲ್ಲಿ ಚರ್ಚೆಗಳು ನಡೆದಿವೆ.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ನೇತೃತ್ವದಲ್ಲಿ ೨ ಹಂತಗಳಲ್ಲಿ ದೆಹಲಿಯಲ್ಲಿ ಸಭೆ ನಡೆದಿದ್ದು, ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರಮುಖ ಮುಖಂಡರ ಸಭೆ ನಡೆಯಿತು.
ಸಂಜೆ ರಾಜ್ಯದ ಎಲ್ಲ ಸಚಿವರುಗಳ ಜತೆಯೂ ವರಿಷ್ಠರು ಚರ್ಚೆ ನಡೆಸಿ ಆಡಳಿತಕ್ಕೆ ಸಂಬಂಧಿಸಿದಂತೆ ನೀತಿ ಪಾಠವನ್ನು ಹೇಳುವ ಜತೆಗೆ ಶಾಸಕರ ಮಾತುಗಳಿಗೆ ಸ್ಪಂದಿಸಿ ಎನ್ನುವ ಕಿವಿಮಾತನ್ನು ಹೇಳಲಿದ್ದಾರೆ ಹಾಗೆಯೇ, ಶಾಸಕರಿಗೂ ಸಹ ಬಹಿರಂಗವಾಗಿ ಅಸಮಾಧಾನ ಹೊರಹಾಕಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಬೇಡಿ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಎಂಬ ಬುದ್ಧಿಮಾತನ್ನು ಹೇಳಲು ವರಿಷ್ಠರು ನಿರ್ಧರಿಸಿದ್ದಾರೆ.
ಲೋಕಸಭಾ ಚುನಾವಣೆಯ ಸಿದ್ಧತೆಯ ಅಜೆಂಡ ಇಂದು ಮಧ್ಯಾಹ್ನ ನಡೆದ ಪ್ರಮುಖರ ಸಭೆಯಲ್ಲಿ ಲೋಕಸಭಾ ಚುನಾವಣೆಯ ಸಿದ್ಧತೆಗಳ ಬಗ್ಗೆಯೇ ಹೆಚ್ಚಿನ ಚರ್ಚೆಗಳು ನಡೆದಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶತಾಯ-ಗತಾಯ ಹೆಚ್ಚಿನ ಸ್ಥಾನ ಗೆಲ್ಲಲೇಬೇಕು. ಹಾಗಾಗಿ ಈಗಿನಿಂದಲೇ ಚುನಾವಣೆಗೆ ತಯಾರಿಗಳನ್ನು ನಡೆಸುವ ಬಗ್ಗೆಯೂ ಚರ್ಚೆಗಳು ನಡೆದಿವೆ.
ಸಚಿವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಚಿವರನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸುವಬಗ್ಗೆ ಚರ್ಚೆಗಳನ್ನು ನಡೆಸಲಾಗಿದೆ. ಗೆಲ್ಲುವ ಮಾನದಂಡದ ಮೇಲೆ ಹಾಲಿ ಸಚಿವರು, ಶಾಸಕರುಗಳನ್ನು ಚುನಾವಣಾ ಕಣಕ್ಕಿಳಿಸುವ ಅಗತ್ಯವಿದೆ. ಅಂತಹ ಸಚಿವರನ್ನು ಈಗಿನಿಂದಲೇ ಲೋಕಸಭಾ ಚುನಾವಣೆಗೆ ತಯಾರಾಗುವಂತೆ ಸಂಜೆ ನಡೆಯುವ ಸಚಿವರ ಸಭೆಯಲ್ಲಿ ಸೂಚನೆ ನೀಡಿ ಪಕ್ಷದ ಹಿತಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧರಾಗಿ ಎಂಬ ಕಿವಿಮಾತನ್ನು ಹೇಳಲು ಪ್ರಮುಖರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಲೋಕಸಭಾ ಚುನಾವಣೆಗೆ ಈಗಿನಿಂದಲೇ ಯಾರನ್ನು ಅಭ್ಯರ್ಥಿ ಮಾಡಿದರೆ ಗೆಲುವು ಸಾಧ್ಯ ಎಂಬ ಬಗ್ಗೆ ಸಮೀಕ್ಷೆಗಳನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಲೋಕಸಭಾ ಚುನಾವಣೆಯ ನೀಲನಕ್ಷೆಯನ್ನು ತಯಾರು ಮಾಡುವ ಬಗ್ಗೆಯೂ ಚರ್ಚೆಗಳು ನಡೆದಿವೆ.
ಪ್ರಮುಖರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್,ರಾಜ್ಯಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಎಐಸಿಸಿ ಸದಸ್ಯರು, ಎಐಸಿಸಿ ಕಾರ್ಯದರ್ಶಿಗಳ ಕೆಲ ಪ್ರಮುಖ ಸದಸ್ಯರೂ ಸೇರಿದಂತೆ ಸುಮಾರು ೪೦ಕ್ಕೂ ಹೆಚ್ಚು ನಾಯಕರು ಪಾಲ್ಗೊಂಡಿದ್ದರು.
ಸಂಜೆ ಸಚಿವರ ಜತೆ ಸಭೆ ಪ್ರಮುಖ ನಾಯಕರ ಸಭೆಯ ಬಳಿಕ ಕಾಂಗ್ರೆಸ್ ವರಿಷ್ಠರು ರಾಜ್ಯದ ಎಲ್ಲ ಸಚಿವರ ಜತೆ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಶಾಸಕರು ಮತ್ತು ಸಚಿವರ ನಡುವಿನ ಸಂಪರ್ಕ ಕೊರತೆಯನ್ನು ನೀಗಿಸಿ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಕಾಯ್ದುಕೊಳ್ಳುವ ಬಗ್ಗೆ ಚರ್ಚೆಗಳು ನಡೆಯಲಿದ್ದು, ಶಾಸಕರ ಅಹವಾಲುಗಳಿಗೆ ಸ್ಪಂದಿಸುವಂತೆ ಎಲ್ಲ ಸಚಿವರಿಗೂ ವರಿಷ್ಠರು ಬುದ್ಧಿಮಾತು ಹೇಳುವರು.
ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ದಂಡು
ದೆಹಲಿಯಲ್ಲಿಂದು ನಡೆದಿರುವ ಕಾಂಗ್ರೆಸ್ ವರಿಷ್ಠರ ಹೈ ವೋಲ್ಟೇಜ್ ಸಭೆಯಲ್ಲಿ ಪಾಲ್ಗೊಳ್ಳಲು ಸರ್ಕಾರದ ಎಲ್ಲ ಸಚಿವರು ದೆಹಲಿಗೆ ತೆರಳಿದ್ದು, ಇವರ ಜತೆಗೆ ಪ್ರಮುಖ ನಾಯಕರು ಹಾಗೂ ಹಲವು ಶಾಸಕರೂ ಸಹ ದೆಹಲಿಯತ್ತ ಮುಖ ಮಾಡಿದ್ದು, ಇಡೀ ಸರ್ಕಾರ ಒಂದು ದಿನದ ಮಟ್ಟಿಗೆ ದೆಹಲಿಯಲ್ಲೇ ಮೊಕ್ಕಾಂ ಹೂಡಿದಂತಾಗಿದೆ.
ವರಿಷ್ಠರ ಇಂದಿನ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೆಲ ಸಚಿವರ ಜತೆ ಇಂದು ಬೆಳಿಗ್ಗೆ ಬೆಂಗಳೂರಿನಿಂದ ದೆಹಲಿಗೆ ತೆರಳಿದರು.ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಲವು ಸಚಿವರು ಹಗೂ ಪ್ರಮುಖ ನಾಯಕರು ನಿನ್ನೆಯೇ ದೆಹಲಿಗೆ ತೆರಳಿದ್ದಾರೆ. ಇಂದು ದೆಹಲಿಯಲ್ಲಿ ರಾಜ್ಯಕಾಂಗ್ರೆಸ್ ನಾಯಕರುಗಳ ದಂಡೇ ಬೀಡು ಬಿಟ್ಟಿದ್ದು, ವರಿಷ್ಠರ ಸಭೆಯ ನಂತರ ಎಲ್ಲರೂ ನಾಳೆ ಬೆಂಗಳೂರಿಗೆ ವಾಪಸ್ಸಾಗುವರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್‌ಸವದಿ ಅವರಿಗೂ ದೆಹಲಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಬಂದಿದ್ದು, ಅವರೂ ಸಹ ದೆಹಲಿಗೆ ತೆರಳಿದ್ದಾರೆ. ಒಟ್ಟಾರೆ ಸಚಿವರೂ ಸೇರಿದಂತೆ ೫೦ ಮಂದಿಗೆ ವರಿಷ್ಠರಿಂದ ಆಹ್ವಾನ ಬಂದಿದೆ.ವರಿಷ್ಠರ ಸಭೆಗೆ ಪಾಲ್ಗೊಳ್ಳಲು ಆಹ್ವಾನಿತರಿಗಷ್ಟೇ ಅವಕಾಶವಿದ್ದರೂ ಹಲವು ಶಾಸಕರು ದೆಹಲಿಗೆ ತೆರಳಿದ್ದು, ಹೈಕಮಾಂಡ್ ಜತೆ ಚರ್ಚೆ ನಡೆಸಿ ತಮ್ಮ ಅಹವಾಲನ್ನು ಹೇಳಿಕೊಳ್ಳಲು ಮುಂದಾಗಿದ್ದಾರೆ. ಆದರೆ,ಇವರಿಗೆ ವರಿಷ್ಠರು ಸಮಯಾವಕಾಶ ನೀಡುವರೇ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.