ಅಸಮರ್ಪಕ ಮಳೆ: ಬೆಳೆ ನಷ್ಟದ ಪರಿಹಾರಕ್ಕೆ ರೈತ ಕೃಷಿ ಕಾರ್ಮಿಕರ ಸಂಘಟನೆ ಒತ್ತಾಯ

ಕಲಬುರಗಿ, ಅ. 30: ಜಿಲ್ಲೆಯಾದ್ಯಂತ ಸಮರ್ಪಕ ಮಳೆ ಬರದ ಕಾರಣ ಆಗಿರುವ ಬೆಳೆ ನಷ್ಟಕ್ಕೆ ಕೂಡಲೇ ಪರಿಹಾರ ನೀಡಬೇಕೆಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಸಮಿತಿಯ ಅಧ್ಯಕ್ಷ ಗಣಪತರಾವ್ ಕೆ. ಮಾನೆ ಮತ್ತು ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್.ಬಿ., ಅವರು ಒತ್ತಾಯಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಮುಂಗಾರು ತಡವಾಗಿ ಪ್ರವೇಶ ಮಾಡಿ ಸಂಪೂರ್ಣ ಮುಂಗಾರು ಬೆಳೆ ನಷ್ಟವಾಗಿದೆ. ತಡವಾದರೂ ಸಹಿತ ಬಹುತೇಕ ಜಿಲ್ಲೆಗಳಲ್ಲಿ ಬಿತ್ತನೆ ಮಾಡಿದರೂ ಸಹ ಮಳೆಯಿಲ್ಲದೆ ಬೆಳೆ ನಷ್ಟವಾಗಿದೆ. ಕೆಲವೆಡೆ ಎರಡೆರಡು ಸಲ ಬಿತ್ತನೆ ಮಾಡಿಯೂ ಕೂಡ ಮಳೆಗಾಗಿ ಕಾದು ಕೂತಿದ್ದಾರೆ. ಈಗ ಬಿತ್ತಿದ ಬೆಳೆಯು ಒಣಗುತ್ತಿದ್ದು, ಸಾಲ ಮಾಡಿ ಬಿತ್ತನೆಗೆ ಖರ್ಚು ಮಾಡಿದ ಹಣ ವಾಪಸ್ ಬರುವಂತೆ ಕಾಣುತ್ತಿಲ್ಲ, ಈ ಪರಿಸ್ಥಿತಿಯಲ್ಲಿ ರೈತರು ಕಂಗಾಲಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬೀಜ, ಗೊಬ್ಬರ ಇನ್ನಿತರ ಎಲ್ಲ ಒಳ ಸುರಿವುಗಳ ಬೆಲೆ ಗಗನಕ್ಕೆ ಏರಿದೆ. ಇದನ್ನೆಲ್ಲ ಸರಿದೂಗಿಸಲು ರೈತರು ಹೆಚ್ಚಿನ ಸಾಲಕ್ಕೆ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ಮುಂಗಾರು ಮಳೆ ವೈಫಲ್ಯದಿಂದ 2022-2023 ಸಾಲಿನಲ್ಲಿ 76 ರೈತರು ಆತ್ಮಹತ್ಯೆಗೆ ಶರಣಾಗಿದ್ದು ಇಂದಿನ ಕೃಷಿ ಬಿಕ್ಕಟ್ಟಿಗೆ ಹಿಡಿದ ಕನ್ನಡಿಯಾಗಿದೆ. ಹೀಗಾಗಿ ದೇಶದ ಬೆನ್ನೆಲುಬು ಆಗಿರುವ ರೈತನ ಬೆನ್ನೆಲುಬೇ ಮುರಿಯುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ದೇಶದ ಪ್ರಗತಿಯು ರೈತನ ಬದುಕಿನ ಮೇಲೆ ನಿಂತಿದೆ. ಹಾಗಾಗಿ ಈ ಕೂಡಲೇ ಸರ್ಕಾರ ಯುದ್ದೋಪಾದಿಯಲ್ಲಿ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳನ್ನು ಪರಿಹರಿಸಿ ಯುದೋಪಾಧಿಯಲ್ಲಿ ಪರಿಹಾರ ಕಾರ್ಯಗಳನ್ನು ಕಯಗೊಳ್ಳುವುದು ತುರ್ತು ಅಗತ್ಯವಾಗಿದೆ. ಇನ್ನೊಂದೆಡೆ ಕೃಷಿ ಕಾರ್ಮಿಕರು, ನರೇಗಾ ಕೂಲಿ ಕಾರ್ಮಿಕರು ಜೀವನ ನಡೆಸುವುದು ದುಸ್ತರವಾಗಿದೆ. ದುಡಿದ ಹಣವು ಕೈ ಸೇರುತ್ತಿಲ್ಲ. ಕೆಲವೆಡೆ 2 ತಿಂಗಳ ಹಣ ಬಾಕಿ ಇದೆ. ಉದ್ಯೋಗವನ್ನು ಅರಸಿ ಬಂದ ರೈತರಿಗೆ ಉದ್ಯೋಗ ಖಾತ್ರಿಯು ಖಾತರಿಯನ್ನುನೀಡುತ್ತಿಲ್ಲ. 50 ಮಾನವ ದಿನ ನೀಡಬೇಕೆಂದು ಹೋರಾಟ ಮಾಡುತ್ತಿದ್ದರೂ ಸರ್ಕಾರ ಹೆಚ್ಚುವರಿ 50 ದಿನ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ, ಒಣಬರದ ಸ್ಥಿತಿಯಂತೆ ಕಾಣುವ ಈ ಕಠಿಣ ಪರಿಸ್ಥಿತಿಯಲ್ಲಿ ರೈತ ಕೃಷಿ ಕಾರ್ಮಿಕರು ಬದುಕು ಬೀದಿಗೆ ಬರುವಂತಾಗಿದೆ ಎಂದು ತಿಳಿಸಿದ ಅವರು, ಮಳೆ ಬರದೆ ನಷ್ಟವಾಗಿರುವ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ನಡೆಸಿ ಸಮರ್ಪಕ ಪರಿಹಾರವನ್ನು ನೀಡುವಂತೆ, ಎಲ್ಲ ಗ್ರಾಮಗಳಲ್ಲಿಯೂ ಸಮರ್ಪಕ ಶುದ್ಧಕುಡಿಯುವ ನೀರಿನ್ನು ಪೂರೈಸುವಂತೆ, ಅವಶ್ಯಕವಿರುವ ಎಲ್ಲರಿಗೂ ಉಚಿತವಾಗಿ ಪಡಿತರ ವಿತರಿಸುವಂತೆ ಒತ್ತಾಯಿಸಿದರು.
ಶಾಲಾ, ಕಾಲೇಜುಗಳಲ್ಲಿ ವಿಧ್ಯಾರ್ಥಿಗಳ ಎಲ್ಲ ರೀತಿಯ ಶುಲ್ಕವನ್ನು ಮನ್ನಾ ಮಾಡುವಂತೆ, ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ, ರೈತರು ಬಹಳ ಸಂಕಷ್ಟದಲ್ಲಿರುವುದರಿಂದಯುದ್ದೋಪಾದಿಯಲ್ಲಿ ಬರಗಾಲ ಪರಿಹಾರ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ, ರೋಜಗಾರ್ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಹಾಗೂ ವರ್ಷ ಪೂರ್ತಿ ಕುಟುಂಬದ ಎಲ್ಲರಿಗೂ ಕೆಲಸ ಒದಗಿಸುವಂತೆ ಅವರು ಆಗ್ರಹಿಸಿದರು.
ಬರ ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ಉಂಟಾಗುವ ವಿಳಂಬ ನೀತಿ, ನಿರ್ಲಕ್ಷ್ಯ, ಪಕ್ಷಪಾತ ಹಾಗೂ ಭ್ರμÁ್ಟಚಾರವನ್ನು ನಿಗ್ರಹಿಸಲು ಕ್ರಮಕೈಗೊಂಡು ಕಟ್ಟಕಡೆಯ ವ್ಯಕ್ತಿಗೂ ಪರಿಹಾರ ಮುಟ್ಟುವಂತೆ ಜಾಗೃತೆ ವಹಿಸುವಂತೆ, ಕೇಂದ್ರ ಸರ್ಕಾರ ಬರ ಪರಿಹಾರದ ಯೋಜನೆಯಡಿಯಲ್ಲಿ ಅವಶ್ಯಕವಿರುವಷ್ಟು ಹಣ ಹಾಗೂ ಪಡಿತರವನ್ನು ಬಿಡುಗಡೆ ಮಾಡುವಂತೆ, ರೈತರು ಬ್ಯಾಂಕ್ ಹಾಗೂ ಕೃಷಿ ಮೇಲೆ ತೆಗೆದುಕೊಂಡಿರುವ ಎಲ್ಲರೀತಿಯ ಸಾಲಗಳನ್ನು ಮನ್ನಾ ಮಾಡುವಂತೆ, ದನ ಕರುಗಳಿಗೆ ಮೇವು ಹಾಗೂ ಕುಡಿಯಲು ನೀರು ಪೂರೈಸಲು ಎಲ್ಲ ಕಡೆ ಮೇವು ಕೇಂದ್ರಗಳನ್ನು ತೆರೆಯುವಂತೆ, ಬರಗಾಲ ಕಾಮಗಾರಿಯ ಮೂಲಕ ಎಲ್ಲರಿಗೂ ವರ್ಷದಾದ್ಯಂತ ಉದ್ದೋಗ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.