ಅಸಭ್ಯ ವರ್ತನೆ ನೇಪಾಳ ಪ್ರಜೆ ವಿರುದ್ಧ ಪ್ರಕರಣ

ನವದೆಹಲಿ,ಜು.೧೨-ಭಾರತೀಯ ವಿಮಾನಗಳಲ್ಲಿ ಪ್ರಯಾಣಿಕರ ಅಶಿಸ್ತು ಮತ್ತು ಅನುಚಿತ ವರ್ತನೆಗಳು ಪದೇ ಪದೇ ಜರುಗುತ್ತಲೇ ಇವೆ.ಇತ್ತೀಚೆಗೆ ಏರ್ ಇಂಡಿಯಾದ ಮುಂಬೈ-ದೆಹಲಿ ವಿಮಾನದಲ್ಲಿ ಸಹ ಪ್ರಯಾಣಿಕರು ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ಇದೀಗ ಟೊರೊಂಟೊ-ದೆಹಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಕ್ಯಾಬಿನ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರಲ್ಲಿ ಒಬ್ಬರ ಮೇಲೆ ಹಲ್ಲೆ ನಡೆಸಿ
ವಿಮಾನದಲ್ಲಿ ಗಲಾಟೆ ಸೃಷ್ಟಿಸಿ ಏರ್ ಇಂಡಿಯಾ ಶೌಚಾಲಯದ ಬಾಗಿಲು ಮುರಿದ ಆರೋಪದ ನೇಪಾಳದ ಪ್ರಜೆಯ ಮೇಲೆ ಪ್ರಕರಣ ದಾಖಲಾಗಿದೆ. ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ.
ಕ್ಯಾಬಿನ್ ಮೇಲ್ವಿಚಾರಕ ಆದಿತ್ಯ ಕುಮಾರ್, ನೀಡಿದ ಮಾಹಿತಿಯಂತೆ ನೇಪಾಳದ ನಿವಾಸಿ ಮಹೇಶ್ ಸಿಂಗ್ ಪಂಡಿತ್ ಎಂಬ ಪ್ರಯಾಣಿಕರು ತಮ್ಮ ಸೀಟನ್ನು ೨೬ಇ ನಿಂದ ೨೬ಎಫ ಗೆ ಬದಲಾಯಿಸಿದರು ಮತ್ತು ಎಕಾನಮಿ ವರ್ಗದ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು ಎಂದು ಹೇಳಿದರು.
ಅವರಿಗೆ ಎಚ್ಚರಿಕೆ ನೀಡಿದ ಕೆಲ ಸಮಯದ ನಂತರ ಮಹೇಶ್ ಶೌಚಾಲಯಲ್ಲಿ ಸಿಗರೇಟು ಸೇದುವ ಸಂದರ್ಭದಲ್ಲಿ ಸಿಕ್ಕಿ ಬಿದ್ದರು. ಶೌಚಾಲಯದಲ್ಲಿ ಹೊಗೆ ಹರಡುತ್ತಿರುವ ಅಪಾಯ ಗುರುತಿಸಿ ಅವರನ್ನು ಹೊರ ಬರಲು ಕೇಳಿಕೊಂಡಾಗ ಅವರು ವಿಮಾನ ಸಿಬ್ಬಂದಿಯನ್ನು ತಳ್ಳಿ, ನಿಂದಿಸಿ , ಶೌಚಾಲಯ ಬಾಗಿಲು ಮುರಿದು ಗಲಾಟೆಗೆ ಮುಂದಾಗಿದ್ದಾರೆ.ಆಗ ಕೆಲ ಪ್ರಯಾಣಿಕರು ಸಹಾಯದಿಂದ ಅವರನ್ನು ಕಟ್ಟಿಹಾಕಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.