ಅಸಂಘಟಿತ ಕಾರ್ಮಿಕರು ಸದಸ್ಯತ್ವ ಪಡೆಯಲಿ

ದೇವದುರ್ಗ.ಏ.೨೦- ಕೂಲಿ ಕಾರ್ಮಿಕರು, ಹಮಾಲರು, ಟೈಲರ್ ಕೆಲಸ ಮಾಡುವವರು, ಕಟ್ಟಡ ಕಾರ್ಮಿಕರು, ಮೆಕಾನಿಕ್ ಸೇರಿದಂತೆ ಅಸಂಘಟಿತ ಕಾರ್ಮಿಕರು, ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ನಾಜಿಯಾ ಸುಲ್ತಾನ್ ಹೇಳಿದರು.
ಪಟ್ಟಣದ ಗೌತಮ್ ಓಣಿಯ ಅಂಬಾಭವಾನಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು. ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡ ಅಸಂಘಟಿತ ಕಾರ್ಮಿಕರಿಗೆ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಮೂಲಕ ಜೀವ ವಿಮೆ, ಅಪಘಾತ ವಿಮೆ ಪಡೆಯಬಹುದು. ಅಸಂಘಟಿತ ಕಾರ್ಮಿಕರು ಮಾತ್ರವಲ್ಲ, ಅವರ ಅವಲಂಬಿತ ತುಂಬದ ಸದಸ್ಯರಿಗೂ ಆರೋಗ್ಯವಿಮೆ ಅನ್ವಯಿಸುತ್ತದೆ. ತಾಲೂಕಿನ ವಿವಿಧ ವಲಯದಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು.
ಅಸಂಘಟಿತ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಕಾರ್ಮಿಕರು ತಮ್ಮ ಮಕ್ಕಳನ್ನು ಯಾವುದೇ ಕೆಲಸಕ್ಕೆ ಕಳುಹಿಸದೆ, ಸರ್ಕಾರದ ಯೋಜನೆಗಳ ಲಾಭ ಪಡೆದು ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ದೇವದುರ್ಗ ತಾಲೂಕಿನಲ್ಲಿ ಕೃಷಿ ಕೆಲಸಕ್ಕೆ ಬಾಲಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತದೆ. ಈ ಬಗ್ಗೆ ನಿರಂತರ ನಿಗಾ ವಹಿಸಲಾಗಿದ್ದು, ಅಧಿಕಾರಿಗಳ ತಂಡ ದಾಳಿ ನಡೆಸಿ ಮಕ್ಕಳನ್ನು ರಕ್ಷಣೆ ಮಾಡುತ್ತಿದೆ. ದಾಳಿ ಸಂದರ್ಭದಲ್ಲಿ ಜಮೀನಿನ ಮಾಲೀಕರು, ಮಕ್ಕಳನ್ನು ಕರೆದೊಯ್ಯುವ ವಾಹನಗಳ ಮಾಲಕರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಬೇಕು. ೧೪ ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಂಡರು ಅದು ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಕಾರ್ಮಿಕ ಇಲಾಖೆ ಸಿಬ್ಬಂದಿ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ನವರತ್ನ, ಖಾಜಾಹುಸೇನ್, ಗಿರಿಯಪ್ಪ ಪೂಜಾರಿ ಇತರರು ಇದ್ದರು.