ಅಸಂಘಟಿತ ಕಾರ್ಮಿಕರು ಪರಿಹಾರಕ್ಕೆ ಅರ್ಜಿ ಸಲ್ಲಿಸಿ

ಉಡುಪಿ, ಜೂ.೪- ಕೋವಿಡ್ ೨ನೇ ಅಲೆಯ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳಿಂದ ಜಿಲ್ಲೆಯ ಅಸಂಘಟಿತ ವಲಯದ ಕಾರ್ಮಿಕರಿಗೆ ತೊಂದರೆ ಯಾಗಿದ್ದು, ಈ ವಲಯಗಳ ಕಾರ್ಮಿಕರಿಗಾಗಿ ರಾಜ್ಯ ಸರಕಾರ ಘೋಷಿಸಿರುವ ೨೦೦೦ ರೂ.ಗಳ ಪರಿಹಾರ ಧನವನ್ನು ಪಡೆಯುವ ಕುರಿತಂತೆ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರ ನೀಡುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಪ್ರಸ್ತುತ ವಿಧಿಸಿರುವ ನಿರ್ಬಂಧಗಳ ಕಾರಣದಿಂದ, ದೈನಂದಿನ ಉದ್ಯೋಗ ವನ್ನು ನಡೆಸಲಾಗದೇ ಆದಾಯ ಕಳೆದುಕೊಂಡಿರುವ ಅಸಂಘಟಿತ ಕಾರ್ಮಿಕ ರಾದ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರ್‌ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರುಗಳಿಗೆ ಒಂದು ಬಾರಿಯ ಪರಿಹಾರವಾಗಿ ಸರಕಾರ ಘೋಷಿಸಿರುವ ೨,೦೦೦ರೂ.ಗಳ ನೆರವನ್ನು ಪಡೆಯುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಕಳೆದ ಸಾಲಿನಲ್ಲಿ ನೆರವು ಪಡೆದಿರುವ ಕಾರ್ಮಿಕರು ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಅರ್ಜಿ ಸಲ್ಲಿಸಿರುವವರು ಹಾಗೂ ಅವರ ಕುಟುಂಬ ಸದಸ್ಯರು ಮತ್ತೊಮ್ಮೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅವರ ಖಾತೆಗೆ ನೇರವಾಗಿ ಪರಿಹಾರದ ಮೊತ್ತ ಜಮೆ ಆಗಲಿದೆ ಎಂದವರು ತಿಳಿಸಿದರು. ಆದರೆ ಕಳದ ಬಾರಿ ಅರ್ಜಿ ಸಲ್ಲಿಸದೇ ಇರುವವರು, ಅರ್ಜಿ ಸಲ್ಲಿಸಿ ತಿರಸ್ಕೃತ ಗೊಂಡಿರುವವರು ಮತ್ತೆ ಅರ್ಜಿ ಸಲ್ಲಿಸಬಹುದಾಗಿದ್ದು, ಕುಟುಂಬದ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗುವುದು. ಪರಿಹಾರ ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದ್ದು, ೧೮ರಿಂದ ೬೫ ವರ್ಷ ವಯೋ ಮಿತಿಯೊಳಗಿನ ಕಾರ್ಮಿಕರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ ೭ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ವಿವರಿಸಿದರು. ಅರ್ಹ ಕಾರ್ಮಿಕರು ಸೇವಾಸಿಂಧು ಪೋರ್ಟಲ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ. ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿರುವ ಆಧಾರ್ ಕಾರ್ಡ್, ಅಧಿಕೃತ ವಿಳಾಸದ ದಾಖಲೆ, ಬಿಪಿಎಲ್ ಕಾರ್ಡ್, ಬ್ಯಾಂಕ್ ಖಾತೆಯ ವಿವರಗಳು, ಸ್ವಯಂ ಘೋಷಣೆ ಮತ್ತು ವೃತ್ತಿಯ ಕುರಿತ ಉದ್ಯೋಗ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಉದ್ಯೋಗ ಪ್ರಮಾಣಪತ್ರ ವಿತರಿಸಲು ನಿಯೋಜಿಸಿರುವ ಅಧಿಕಾರಿಗಳು ಕಾರ್ಮಿಕರು ಈ ವೃತ್ತಿ ನಿರ್ವಹಿಸುತ್ತಿರುವ ಕುರಿತು ಖಚಿತ ಪಡಿಸಿಕೊಂಡು ಪ್ರಮಾಣಪತ್ರವನ್ನು ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಪ್ರಸ್ತುತ ಕೋವಿಡ್ ನಿರ್ಬಂಧಗಳ ಕಾರಣದಿಂದ ಜಿಲ್ಲೆಯ ಸೇವಾ ಸಿಂಧು ಕೇಂದ್ರಗಳನ್ನು ಮುಚ್ಚಿದ್ದು, ಇದರಿಂದ ಪರಿಹಾರದ ಅರ್ಜಿಗಳನ್ನು ಸಲ್ಲಿಸಲು ತೊಂದರೆಯಾಗುತ್ತಿದೆ ಎಂದು ಕಾರ್ಮಿಕ ವಲಯಗಳ ಮುಖಂಡರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಸರಕಾರವು ಚಾಲಕರು, ಕಲಾವಿದರು, ಅಸಂ ಘಟಿತ ವಲಯದ ಕಾರ್ಮಿಕರು, ಚಮ್ಮಾರರಿಗೆ ಕೋವಿಡ್ ಪರಿಹಾರ ಘೋಷಿಸಿದ್ದು,ಈ ವರ್ಗದ ಕಾರ್ಮಿಕರು ಪರಿಹಾರದ ಅರ್ಜಿಗಳನ್ನು ಸಲ್ಲಿಸಲು ಮಾತ್ರ ಜಿಲ್ಲೆಯ ಸೇವಾಸಿಂಧು ಕೇಂದ್ರಗಳನ್ನು ಲಾಕ್‌ಡೌನ್ ಇರುವ ಗ್ರಾಪಂ ಗಳ ವ್ಯಾಪ್ತಿಯಲ್ಲಿ ಜೂನ್ ೫ರಂದು ಮತ್ತು ಇತರೆ ಕಡೆಗಳಲ್ಲಿ ಜೂನ್ ೪ ಮತ್ತು ೫ರಂದು ಬೆಳಗ್ಗೆ ೬ರಿಂದ ೧೦ರವರೆಗೆ ಮಾತ್ರ ತೆರೆಯುವಂತೆ ಜಿಲ್ಲಾಧಿಕಾರಿಗಳು ಆದೇಶಿದ್ದು, ಈ ಪರಿಹಾರದ ಅರ್ಜಿ ಹೊರತುಪಡಿಸಿ ಸೇವಾ ಕೇಂದ್ರಗಳಲ್ಲಿ ಇತರೇ ಯಾವುದೇ ವಸ್ತುಗಳ ಮಾರಾಟ ಅಥವಾ ಸೇವೆಗಳನ್ನು ನೀಡುವುದು ಕಂಡುಬಂದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು
ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.