ಅಸಂಘಟಿತ ಕಾರ್ಮಿಕರು ಇ-ಶ್ರಮ್ ಯೋಜನೆಯಡಿ ನೋಂದಾಯಿಸಿಕೊಳ್ಳಲು ಕರೆ

ಕಲಬುರಗಿ,ನ.10:ಜಿಲ್ಲೆಯ ಪ್ರತಿಯೊಬ್ಬ ಅರ್ಹ ಅಸಂಘಟಿತ ಕಾರ್ಮಿಕರು ಸಮಗ್ರ ರಾಷ್ಟ್ರೀಯ ದತ್ತಾಂಶ (ಇ-ಶ್ರಮ್) ಯೋಜನೆಯಡಿ ನೋಂದಣಿ ಮಾಡಿಕೊಂಡು ಸವಲತ್ತು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಕರೆ ನೀಡಿದರು.
ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಸಂಘಟಿತ ಕಾರ್ಮಿಕ ನೋಂದಣಿಗಾಗಿ ಸಮಗ್ರ ರಾಷ್ಟ್ರೀಯ ಡೇಟಾಬೇಸ್ (ಎನ್.ಡಿ.ಯು.ಡಬ್ಲೂ.) ಜಾರಿಗಾಗಿ ರಚಿಸಿರುವ ಜಿಲ್ಲಾ ಮಟ್ಟದ ಸಮಿತಿ ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ನಿರ್ಧರಣೆ, ಸಂಗ್ರಹಣೆ ಮತ್ತು ವಸೂಲಾತಿ ಕುರಿತ ಸುಂಕ ಅಭಿಯಾನದ ಕುರಿತ ಜರುಗಿದ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಶ್ರಮ ಜೀವಿಗಳು ಉದ್ಯೋಗಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇವರಿಗೆ ಕೇಂದ್ರ ಸರ್ಕಾರದ ಇ-ಶ್ರಮ ಪೋರ್ಟಲ್ ಮೂಲಕ ಲಭ್ಯವಾಗುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಅಧಿಕಾರಿಗಳು ಶ್ರಮಿಸಬೇಕು ಎಂದರು.
ಪ್ರಸ್ತುತ ಇ-ಶ್ರಮ ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಂಡಿದಲ್ಲಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 2 ಲಕ್ಷ ರೂ. ವಿಮಾ ಸೌಲಭ್ಯಕ್ಕೆ ಅರ್ಹರಾಗುತ್ತಾರೆ.
ಕರ್ನಾಟಕ ರಾಜ್ಯಕ್ಕೆ ಈ ಯೋಜನೆಯಡಿ 1.89 ಕೋಟಿ ಅಸಂಘಟಿಕ ಕಾರ್ಮಿಕರನ್ನು ನೋಂದಣಿಗೆ ಗುರಿ ನೀಡಲಾಗಿದೆ. ಜಿಲ್ಲೆಯ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಬರುವ ಡಿಸೆಂಬರ್ 31 ರೊಳಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಹೆಚ್ಚಿನ ನೋಂದಣಿ ಆಗುವಂತೆ ನೋಡಿಕೊಳ್ಳಬೇಕು ಎಂದರು.
ನೋಂದಣಿ ವಿಧಾನ ಮತ್ತು ಬೇಕಾಗುವ ದಾಖಲೆಗಳು: ಅಸಂಘಟಿತ ಕಾರ್ಮಿಕರು ಇ-ಶ್ರಮ ಪೋರ್ಟಲ್ ತಿತಿತಿ.eshಡಿಚಿm.gov.iಟಿ ನಲ್ಲಿ ಸ್ವಯಂವಾಗಿ ಅಥವಾ ಕಾಮನ್ ಸರ್ವಿಸ್ ಸೆಂಟರ್ ಮೂಲಕ ನೋಂದಣಿ ಮಾಡಿಕೊಂಡು ಯು.ಎ.ಎನ್. ಗುರುತಿನ ಚೀಟಿಯನ್ನು ಪಡೆಯಬಹುದಾಗಿದೆ. ನೊಂದಣಿಗೆ ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೋಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರಗಳಿದ್ದರೆ ಸಾಕು.
ನೋಂದಣಿಗೆ ಯಾರು ಅರ್ಹರು: ಇ-ಶ್ರಮ ಯೋಜನೆಯಡಿ ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತೀ ಸಣ್ಣ ರೈತರು, ಮೀನುಗಾರರು, ಪಶುಸಂಗೋಪನಾಗಾರರು, ನೇಕಾರರು, ಬಡಗಿಗಳು, ಆಶಾ ಕಾರ್ಯಕರ್ತೆಯರು, ಫೋಟೋಗ್ರಾಫರ್ಸ್, ಕ್ಷೌರಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಮನೆ ಕೆಲಸದವರು, ಪತ್ರಿಕೆ ಮಾರಾಟಗಾರರು, ನರೇಗಾ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಅಂಗಡಿ ವ್ಯಾಪಾರಸ್ಥರು, ಚರ್ಮ ಕೈಗಾರಿಕಾ ಕಾರ್ಮಿಕರು, ಆನ್‍ಲೈನ್ ಸೇವಾ ಕಾರ್ಮಿಕರು, ಟೇಲರ್‍ಗಳು, ಹೋಟೆಲ್ ಕಾರ್ಮಿಕರು, ಬೇಕರಿ ವ್ಯಾಪಾರಸ್ಥರು, ವಲಸೆ ಕಾರ್ಮಿಕರು, ಮೆಕ್ಯಾನಿಕ್ ಕಾರ್ಮಿಕರು ಸೇರಿದಂತೆ ಹೀಗೆ ಒಟ್ಟಾರೆ 156 ವರ್ಗಗಳ 16 ರಿಂದ 59 ವರ್ಷದೊಳಗಿರುವರರು, ಇ.ಪಿ.ಎಫ್. ಮತ್ತು ಇ.ಎಸ್.ಐ.ಸಿ. ಸದಸ್ಯತ್ವ ಹೊಂದಿರದವರು ಹಾಗೂ ಆದಾಯ ತೆರಿಗೆ ಪಾವತಿಸದ ಅಸಂಘಟಿತ ವಲಯದ ಕಾರ್ಮಿಕರು ನೋಂದಣಿಗೆ ಅರ್ಹರಾಗಿದ್ದಾರೆ. ಇನ್ನೂ ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಇ-ಶ್ರಮ ಯೋಜನೆಯ ಹೆಚ್ಚಿನ ವಿವರಗಳಿಗಾಗಿ ಸಹಾಯವಾಣಿ ಸಂಖ್ಯೆ 155214 ಸಂಪರ್ಕಿಸಬಹುದಾಗಿದೆ.
ಕಲ್ಯಾಣ ಮಂಡಳಿಗೆ ಸುಂಕ ಪಾವತಿಗೆ ಕ್ರಮ ವಹಿಸಿ: ಕಾರ್ಮಿಕ ಇಲಾಖೆಯಿಂದ ಕಲ್ಯಾಣ ಸುಂಕ ಸಂಗ್ರಹಣೆಗೆ ವಿಶೇಷ ಅಭಿಯಾನ ಮತ್ತು ಮಾಸಾಚರಣೆ ಹಮ್ಮಿಕೊಂಡಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ಮಾಲೀಕರು ಅಥವಾ ನಿಯೋಜಕರು ಕಟ್ಟಡ ನಿರ್ಮಾಣ ವೆಚ್ಚದ ಶೇ.1 ರಷ್ಟನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಪಾವತಿಯಾಗುವಂತೆ ಸೂಕ್ತ ಕ್ರಮ ವಹಿಸಬೇಕೆಂದು ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕೃಷಿ, ನೀರಾವರಿ ಮೊದಲಾದ ಇಲಾಖಾ ಅಧಿಕಾರಿಗಳಿಗೆ ಡಿ.ಸಿ. ವಿ.ವಿ.ಜ್ಯೋತ್ಸ್ನಾ ನಿರ್ದೇಶನ ನೀಡಿದರು.

ಇನ್ನೂ ನಿರ್ಮಾಣ ಕಾಮಗಾರಿ ಸಂಬಂಧ ಈಗಾಗಲೇ ವಸೂಲಾಗಿರುವ ಸುಂಕವನ್ನು ಕೂಡಲೇ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಖಾತೆಗೆ ಜಮೆ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಡಿ.ಸಿ. ಅವರು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಉಪ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ ಅವರು ಮಾತನಾಡಿ, ರಾಜ್ಯದಲ್ಲಿ ಇ-ಶ್ರಮ್ ಪೋರ್ಟಲ್‍ನಲ್ಲಿ ಇದೂವರೆಗೆ ನೋಂದಣಿಯಾದ 8,88,018 ಅಸಂಘಟಿತ ಕಾರ್ಮಿಕರ ಪೈಕಿ ಕಲಬುರಗಿ ಜಿಲ್ಲೆಯ ಸಂಖ್ಯೆ 44,516 ರಷ್ಟಿದೆ ಎಂದರು.
ಕಲ್ಯಾಣ ಸುಂಕ ಅಭಿಯಾನದ ಕುರಿತು ಮಾತನಾಡಿ ಉಪ ಕಾರ್ಮಿಕ ಆಯುಕ್ತರು ನಿರ್ಮಾಣ ಕಾಮಗಾರಿಗಳ ಮಾಲೀಕರು ಸುಂಕವನ್ನು ವಸೂಲಾತಿ ಮಾಡಲು ಹಾಗೂ ವಸೂಲಾತಿ ಮಾಡಿರುವ ಸುಂಕವನ್ನು ಮಂಡಳಿಯ ಖಾತೆಗೆ ನಿಗದಿತ ಅವಧಿಯಲ್ಲಿ ಜಮೆ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಅವಿನಾಶ ನಾಯಕ್, ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಟ್ಟಡ ಕಾರ್ಮಿಕ ಮತ್ತು ಅಸಂಘಟಿತ ಕಾರ್ಮಿಕ ಸಂಘಗಳ ಪದಾಧಿಕಾರಿಗಳು, ಮಾಲೀಕರು ಮತ್ತಿತರಿದ್ದರು.