ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಜಾರಿಗೆ ಪ್ರತಿಭಟನೆ

ದಾವಣಗೆರೆ.: ಅಗತ್ಯ ವಸ್ತುಗಳು, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ, 32 ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಜಾರಿಗೊಳಿಸಲು ಒತ್ತಾಯಿಸಿ ನಗರದಲ್ಲಿ ಎಐಟಿಯುಸಿ ಪ್ರತಿಭಟನೆ ನಡೆಸಿತು.ನಗರದ ಜಯದೇವ ವೃತ್ತದಲ್ಲಿ ಶನಿವಾರ ಮಧ್ಯಾಹ್ನ ಆಲ್ ಇಂಡಿಯ ಟ್ರೇಡ್ ಯೂನಿಯನ್ ಕಾಂಗ್ರೇಸ್ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಎಸಿ ದುರ್ಗಾಶ್ರೀ ಅವರಿಗೆ ಮನವಿ ಸಲ್ಲಿಸಿ, ರಾಜ್ಯದ ಮುಖ್ಯಮಂತ್ರಿಗಳಿಗೆ ರವಾನಿಸುವಂತೆ ಮನವಿ ಮಾಡಿದರು.ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ನರೇಗಾ ರಂಗನಾಥ್, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರುತ್ತಿದೆ. ಈ ಕೂಡಲೇ ಏರಿಕೆಗೆ ನಿಯಂತ್ರಣ ಮಾಡಬೇಕು. ಇದಲ್ಲದೇ ಇಂಧನಗಳ ಬೆಲೆ, ಔಷಧಿ ಸೇರಿದಂತೆ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ತಕ್ಷಣ ಇಳಿಕೆ ಮಾಡಬೇಕೆಂದು ಆಗ್ರಹಿಸಿದರು.ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಡಿ.ಶೆಟ್ಟರ್ ಮಾತನಾಡಿ, ಈಗಾಗಲೇ ಬೆಲೆ ಏರಿಕೆಯಿಂದ ರಾಜ್ಯ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಇವೆಲ್ಲ ಸಮಸ್ಯೆಗಳ ಮಧ್ಯೆ ಜನರ ಜೀವನ ಅವ್ಯವಸ್ತ ಆಗಿದೆ. ಒಂದು ಕಡೆ ಉದ್ಯೋಗ ಸಿಗುತ್ತಿಲ್ಲ. ಸರ್ಕಾರಗಳು ಕನಿಷ್ಟ ವೇತನ ಜಾರಿಗೊಳಿಸುತ್ತಿಲ್ಲ. ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಸಿಗುತ್ತಿದ್ದು, ಇದರಿಂದಾಗಿ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಅಲ್ಲದೇ 32 ವಲಯದ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ಜಾರಿಗೊಳಿಸುತ್ತೇವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು, ಆದರೂ 1 ವರ್ಷವಾದರೂ ಅಸಂಘಟಿತ ಕೆಲಸಗಾರರಿಗೆ ಕಾರ್ಮಿಕ ಕಲ್ಯಾಣ ಮಂಡಳಿ ಜಾರಿ ಗೊಳಿಸಿಲ್ಲ. ಈ ಕೂಡಲೇ ಜಾರಿಗೆ ಮುಂದಾಗಬೇಕೆAದು ಒತ್ತಾಯಿಸಿದರು.ಈ ವೇಳೆ ಕಟ್ಟಡ ಕಾರ್ಮಿಕರ ಸಂಘದ ರಾಜಾಧ್ಯಕ್ಷ ಹೆಚ್.ಜಿ.ಉಮೇಶ್, ಹೆಚ್.ಪರಶುರಾಮ್, ಎ.ತಿಪ್ಪೇಶ್, ಎಸ್.ಮೌನಾಚಾರಿ, ಶಿವಕುಮಾರ್, ಸುರೇಶ್, ಜಯಮ್ಮ ಮಳಲ್ಕೆರೆ ಇತರರು ಇದ್ದರು.