ಅಷ್ಟೂರ ಐತಿಹಾಸಿಕ ಸ್ಮಾರಕಗಳ ಆವರಣದಲ್ಲಿ ಜಿಲ್ಲಾಡಳಿತದಿಂದ ಅಮೃತ ಮಹೋತ್ಸವ ಕಾರ್ಯಕ್ರಮ

ಬೀದರ ಏ.10: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ 75ನೇ ವರ್ಷದ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಎರಡನೇ ಕಾರ್ಯಕ್ರಮವು ಬೀದರ ತಾಲೂಕಿನ ಅಷ್ಟೂರ ಗ್ರಾಮದ ಹತ್ತಿರದ ಐತಿಹಾಸಿಕ ಸ್ಮಾರಕಗಳ ಆವರಣದಲ್ಲಿ ಏಪ್ರೀಲ್ 9ರಂದು ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, ನಮಗೆ ದೊರಕಿರುವಂತಹ ಸ್ವಾತಂತ್ಯವು ಬಹಳ ಸುಲಭವಾಗಿ ಸಿಕ್ಕಿಲ್ಲ. ಅನೇಕ ಮಹಾನ್ ಹೋರಾಟಗಾರರು ಇಡೀ ತಮ್ಮ ಜೀವನವನ್ನು ತ್ಯಾಗ ಮಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅವರ ನಿಸ್ವಾರ್ಥ ಸೇವೆ ಸ್ಮರಣೀಯವಾಗಿದೆ. ತಮ್ಮ ಮುಂದಿನ ಪೀಳಿಗೆ ಚೆನ್ನಾಗಿರಲಿ, ನೆಮ್ಮದಿಯಾಗಿರಲಿ, ಶಾಂತಿಯುತವಾಗಿರಲಿ ಎಂದು ಅವರು ಆಶಿಸಿ ಕಂಡಿರುವಂತಹ ಕನಸನ್ನು ನನಸು ಮಾಡುವುದರಲ್ಲಿ ನಾವೆಲ್ಲರೂ ಶ್ರಮಪಡಬೇಕು ಎಂದು ತಿಳಿಸಿದರು.

ನಮ್ಮ ಭಾರತ ದೇಶದ ಭವಿಷ್ಯವು ಯುವಪೀಳಿಗೆಯ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಆದಕಾರಣ ಯುವಪೀಳಿಗೆಯಾಗಿರುವಂತಹ ಎಲ್ಲ ವಿದ್ಯಾರ್ಥಿ ಯುವಜನರು ಉನ್ನತ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ಎಲ್ಲರಿಗೂ ಶಿಕ್ಷಣ ತಲುಪುವಂತಹ ದೃಷ್ಠಿಯಲ್ಲಿ ಗುಣಮಟ್ಟವಾದ ಶಿಕ್ಷಣವನ್ನು ನೀಡುವುದರಲ್ಲಿ ಸರ್ಕಾರಗಳು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಿವೆ. ಈ ವಿಷಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸೇವೆಯು ಕೂಡ ಮುಖ್ಯವಾಗಿದೆ ಎಂದು ತಿಳಿಸಿದರು.

ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಮಾನವ ಸಂಪನ್ಮೂಲವನ್ನು ಸದೃಢಗೊಳಿಸಬೇಕಿದೆ. ದೇಶವು ಇನ್ನೂ ಸರ್ವಾಂಗೀಣ ಪ್ರಗತಿ ಹೊಂದುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೂಡ 75ನೇ ವರ್ಷದ ಭಾರತ ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಆತ್ಮವಲೋಕನ ಮಾಡಿಕೊಂಡು ನಾವುಗಳು ಯಾವ ದೃಷ್ಟಿಕೋನ ಹೊಂದಿ ಕೆಲಸ ನಿರ್ವಹಿಸಬೇಕು. ಮುಂದೆ ಹೇಗೆ ಕೆಲಸ ನಿರ್ವಹಿಸಬೇಕೆಂಬುದನ್ನು ವಿಚಾರ ಮಾಡಿಕೊಂಡು ಎಲ್ಲರೂ ಒಗ್ಗಟ್ಟಾಗಿ ಮುಂದೆ ಸಾಗೋಣ ಎಂದು ಅವರು ಸಲಹೆ ನೀಡಿದರು.

ಇದೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಅವರು ಮಾತನಾಡಿ, ನಮ್ಮ ಹಿಂದಿನ ಇತಿಹಾಸವನ್ನು ನಾವು ಸರಿಯಾಗಿ ಅರ್ಥೈಸಿಕೊಂಡಾಗ ಮಾತ್ರ ಏನನ್ನಾದರು ಸಾಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಇತಿಹಾಸದ ಅರಿವು ಅತೀ ಅವಶ್ಯವಿದೆ ಎಂದು ತಿಳಿಸಿದರು.

75ನೇ ವರ್ಷದ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವಿದ್ದೇವೆ. ಹೊಸತನ್ನು ಸಾಧಿಸಲಿಕ್ಕೆ ಸ್ವಾತಂತ್ರ್ಯ ಹೋರಾಟಗಾಥೆಯನ್ನು ನಾವೆಲ್ಲರೂ ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಚಿಂತಕಿ ಮತ್ತು ವಿಮರ್ಶಕಿ ರಜೀಯಾ ಬಳಬಟ್ಟಿ ಅವರು ಇದೆ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಜಾನಪದ ಕಲಾವಿದ ಶಂಕರ ಚೊಂಡಿ ಅವರು ದೇಶಭಕ್ತಿ ಗೀತೆಗಳನ್ನು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್.ಜಿ.ನಾಡಗೀರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ಗವಿಸಿದ್ಧ ಹೊಸಮನಿ, ನೆಹರೂ ಯುವ ಕೇಂದ್ರದ ಅಧಿಕಾರಿ ಮಯೂರ ಗುರ್ಮೆ, ಉಪನ್ಯಾಸಕರಾದ ರಾಜಕುಮಾರ ಅಲ್ಲೂರೆ, ದಯಾನಂದ ಸ್ವಾಮಿ ಹಾಗೂ ಇತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಸ್ವಾಗತಿಸಿದರು. ಶಿಕ್ಷಕರಾದ ದೇವಿದಾಸ ಜೋಶಿ ಅವರು ನಿರೂಪಿಸಿದರು.