ಅಶ್ವಥನಾರಾಯಣ ಹೇಳಕೆಗೆ ಸಿದ್ದರಾಮಯ್ಯ ಆಕ್ರೋಶ

ಕಲಬುರಗಿ,ಜು.14-“ಸಿದ್ದರಾಮೋತ್ಸವ ಸಿದ್ದರಾಮಯ್ಯನವರನ್ನು ಮನೆ ಕಡೆ ಕಳುಹಿಸುವುದಕ್ಕಾಗಿ ಆಚರಿಸುತ್ತಿರುವ ಉತ್ಸವ” ಎಂದು ಸಚಿವ ಅಶ್ವಥನಾರಾಯಣ ನೀಡಿರುವ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ 75 ನೇ ಹುಟ್ಟು ಹಬ್ಬ ನನ್ನ ಬೆಂಬಲಿಗರು ಮಾಡುತ್ತಿದ್ದಾರೆ. ನಮ್ಮ ಹುಟ್ಟು ಹಬ್ಬ ನಾವು ಮಾಡಿಕೊಳ್ಳುತ್ತಿದ್ದರೆ ಬಿಜೆಪಿಯವರಿಗೆ ಭಯ ಶುರುವಾಗಿದೆ. ಅದಕ್ಕಾಗಿಯೇ ನನ್ನ ಹುಟ್ಟು ಹಬ್ಬದ ಬಗ್ಗೆ ಬಿಜೆಪಿಯವರು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಯಡಿಯೂರಪ್ಪ ಸಹ 75 ನೇ ಹುಟ್ಟು ಹಬ್ಬ ಆಚರಿಸಿಕೊಂಡಿರಲಿಲ್ಲವಾ ? ಎಂದು ಪ್ರಶ್ನಿಸಿದ ಅವರು, ನಾನೂ ಯಡಿಯೂರಪ್ಪ ಅವರ ಹುಟ್ಟು ಹಬ್ಬ ಕಾರ್ಯಕ್ರಮಕ್ಕೆ ಹೋಗಿ ವಿಷ್ ಮಾಡಿ ಬಂದಿದ್ದೇನೆ ಎಂದರು.
ಹುಟ್ಟುಹಬ್ಬವನ್ನು ಸಿದ್ದರಾಮೋತ್ಸವ ಅಂತ ಕರೆದಿದ್ದೇ ಮಾಧ್ಯಮದವರು. ಅದು ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮಯ್ಯನವರ 75 ನೇ ಹುಟ್ಟು ಹಬ್ಬ ಅಷ್ಟೇ. ನನ್ನ ಹುಟ್ಟು ಹಬ್ಬ ಆಚರಣೆ ಬಗ್ಗೆ ನಮ್ಮ ಪಕ್ಷದಲ್ಲಿ ಯಾರಿಗೂ ನಡುಕ ಇಲ್ಲ. ನಮ್ಮವರಲ್ಲಿ ಯಾಕೆ ನಡುಕ ಇರುತ್ತೆ. ಇದೆಲ್ಲಾ ಸುಳ್ಳು ಎಂದು ಹೇಳಿದರು.