ಅಶ್ಲೀಲ ಮೆಸೇಜ್ ಹಾಕುತ್ತಿದ್ದ ಆಂಧ್ರದ ಯುವಕ ಬಂಧನ

ಶಿವಮೊಗ್ಗ, ಎ. 22: ಯುವತಿಯೋರ್ವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣ
ಇನ್ಸ್ಟ್ರಾಗ್ರಾಂನಲ್ಲಿ ನಕಲಿ ಖಾತೆ ತೆರೆದು, ಅಶ್ಲೀಲ ಮೆಸೇಜ್ ಅಪ್’ಲೋಡ್
ಮಾಡುತ್ತಿದ್ದ ಆರೋಪದ ಮೇರೆಗೆ ಆಂಧ್ರಪದೇಶದ ಯುವಕನೋರ್ವನನ್ನು ಶಿವಮೊಗ್ಗ ಸಿಇಎನ್
ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಆಂಧ್ರದ ರೇಣುಗುಂಟ ಪ್ರದೇಶದ ಬಷೀರ್ (26) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ
ಐಟಿ ಸಂಸ್ಥೆಯೊಂದರ ಉದ್ಯೋಗಿ ಎನ್ನಲಾಗಿದೆ. ಈತನಿಂದ ಕೃತ್ಯಕ್ಕೆ ಬಳಕೆ ಮಾಡಿದ್ದ ಎರಡು
ಮೊಬೈಲ್ ಪೋನ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯು ಯುವತಿಯೋರ್ವಳ ಫೋಟೋ ಬಳಸಿ, ಇನ್ಸ್ಟ್ರಾಗ್ರಾಂ ಖಾತೆ ತೆರೆದಿದ್ದ. ಅಶ್ಲೀಲ
ಮೆಸೇಜ್, ಫೋಟೋಗಳನ್ನು ಖಾತೆಯಲ್ಲಿ ಅಪ್’ಲೋಡ್ ಮಾಡುತ್ತಿದ್ದ. ಈ ಮೂಲಕ ಯುವತಿಗೆ
ಮಾನಸಿಕ ಕಿರುಕುಳ ನೀಡುತ್ತಿದ್ದ.

ಈ ಸಂಬಂಧ ಯುವತಿಯು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಸುಳಿವು ಪತ್ತೆ ಹಚ್ಚಿ ಬಂಧಿಸುವಲ್ಲಿ
ಸಫಲರಾಗಿದ್ದಾರೆ.